ತ್ರಿಭಾಷಾ ನೀತಿಯಿಂದಾಗಿ ಆಡಳಿತ ವ್ಯವಸ್ಥೆಯಲ್ಲಿ ಕನ್ನಡವೇ ಅಳಿದುಹೋಗವ ಸ್ಥಿತಿ ತಲುಪಿದೆ : ಎಸ್.ಜಿ.ಸಿದ್ದರಾಮಯ್ಯ
ಬೆಂಗಳೂರು : ತ್ರಿಭಾಷಾ ನೀತಿಯಿಂದಾಗಿ ಪ್ರಾಥಮಿಕ ಶಿಕ್ಷಣ ಹಾಗೂ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಕನ್ನಡವೇ ಅಳಿದು ಹೋಗುವ ಸ್ಥಿತಿ ತಲುಪಿದೆ. ಕನ್ನಡ, ಕರ್ನಾಟಕ ಹಾಗೂ ಕನ್ನಡಿಗರಿಗಾಗಿ ಮತ್ತೊಮ್ಮೆ ಗೋಕಾಕ್ ಚಳವಳಿಯ ಮಾದರಿಯಲ್ಲಿ ಹೋರಾಟ ರೂಪಿಸಬೇಕಾಗಿದೆ ಎಂದು ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದ್ದಾರೆ.
ಸೋಮವಾರ ನಗರದ ಪ್ರೆಸ್ಕ್ಲಬ್ನಲ್ಲಿ ಹಿಂದಿ ಹೇರಿಕೆ ವಿರೋಧಿ ಕರ್ನಾಟಕ ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆಯಲ್ಲಿ ಹಿಂದಿ ಹೇರಿಕೆ ದೇಶದ್ರೋಹಿ ಕೃತ್ಯವಿದ್ದಂತೆ. ಕೇಂದ್ರದ ಇಲಾಖೆಗಳಲ್ಲಿ ಕನ್ನಡ ಸಂಪೂರ್ಣ ಕಡೆಗಣನೆಯಾಗಿದೆ. ಸೆ.14 ರಂದು ದೇಶವ್ಯಾಪಿ ಹಿಂದಿ ದಿವಸ್ ಆಚರಿಸಲಾಗುತ್ತಿದೆ. ದಕ್ಷಿಣ ಭಾರತದ ರಾಜ್ಯಗಳು ಒಗ್ಗಟ್ಟಾಗಿ ‘ರಾಜ್ಯಭಾಷಾ ದಿವಸ್’ ಎಂದು ಮತ್ತು ರಾಜ್ಯದಲ್ಲಿ ಅದನ್ನು ‘ಕನ್ನಡ ದಿವಸ’ ಎಂದು ಆಚರಿಸಬೇಕು ಎಂದು ಒತ್ತಾಯಿಸಿದರು.
ಹಿರಿಯ ಪತ್ರಕರ್ತ ಜಾಣಗೆರೆ ವೆಂಕಟರಾಮ್ಯ ಮಾತನಾಡಿ, ಕನ್ನಡದ ಉಳಿವಿಗಾಗಿ ರಾಜ್ಯದಲ್ಲಿ ತ್ರಿಭಾಷಾ ನೀತಿ ರದ್ದುಪಡಿಸಿ, ದ್ವಿಭಾಷಾ ನೀತಿ ಅನುಷ್ಠಾನ ಗೊಳಿಸಬೇಕು. ಬ್ಯಾಂಕ್, ಅಂಚೆ ಕಚೇರಿಗಳಲ್ಲಿ ಕನ್ನಡ ಕಡ್ಡಾಯಗೊಳಿಸಲು ಮಂಡ್ಯದ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿ ಹಿಂದಿ ಹೇರಿಕೆ ವಿರೋಧಿ ಕರ್ನಾಟಕ ಒಕ್ಕೂಟದ ನೇತೃತ್ವದಲ್ಲಿ ಜನಾಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಹಿಂದಿ ಹೇರಿಕೆ ಮೂಲಕ ಕನ್ನಡವನ್ನು ಅಪ್ರಸ್ತುತಗೊಳಿಸುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ತ್ರಿಭಾಷಾ ಸೂತ್ರ ಜಾರಿಯಲ್ಲಿದ್ದರೂ ರಾಜ್ಯದ ಬ್ಯಾಂಕು, ಅಂಚೆ ಹಾಗೂ ವಿಮಾ ಕಚೇರಿಗಳಲ್ಲಿ ಕನ್ನಡ ಭಾಷೆಯನ್ನ ನಿರ್ಲಕ್ಷಿಸಲಾಗಿದೆ. ಹಾಗಾಗಿ ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಹಿಂದಿ ಹೇರಿಕೆ ವಿರೋಧಿಸಿ ವಿನೂತನ ಆಂದೋಲನ ಕೈಗೊಳ್ಳಲಾಗಿದೆ. ಅಂದು ಸಾವಿರಾರು ಕನ್ನಡದ ಕಾರ್ಯಕರ್ತರು, ವಿದ್ಯಾರ್ಥಿಗಳು ಕನ್ನಡಪರ ಘೋಷ ವಾಕ್ಯದ ಟೀಷರ್ಟ್ ಧರಿಸಿ, ಕರಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸಲಿದ್ದಾರೆ ಎಂದು ಅವರು ತಿಳಿಸಿದರು.
ಹಿಂದಿ ಭಾಷೆ ಹೇರಿಕೆ ಕುರಿತು ಸಮ್ಮೇಳನದಲ್ಲಿ ಚರ್ಚಾಗೋಷ್ಠಿ ಆಯೋಜಿಸಲು ಕಸಾಪ ರಾಜ್ಯಾಧ್ಯಕ್ಷರ ಒತ್ತಾಯಿಸಲಾಗಿತ್ತು. ಈ ಬಗ್ಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಆದರೆ, ಸಮ್ಮೇಳನಾಧ್ಯಕ್ಷರು ಈ ವಿಷಯದ ಕುರಿತು ಪ್ರಸ್ತಾಪಿಸುವುದಾಗಿ ಭರವಸೆ ನೀಡಿದ್ದಾರೆ. ಹಿಂದಿ ಹೇರಿಕೆ ನಿಷೇಧ ಕುರಿತು ಸಮಾರೋಪದಲ್ಲಿ ನಿರ್ಣಯ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಮ್ಮೇಳನಕ್ಕೆ ಅಡ್ಡಿಯಾಗದಂತೆ ಜನರೇ ಒತ್ತಾಯಿಸುವಂತೆ ವಾತಾವರಣ ಸೃಷ್ಟಿಸಲಾಗುವುದು ಎಂದು ಜಾಣಗೆರೆ ವೆಂಕಟರಾಮ್ಯ ಎಚ್ಚರಿಕೆ ನೀಡಿದರು.
ದಸಂಸ ಅಂಬೇಡ್ಕರವಾದ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಜಿಎಸ್ಟಿ ತೆರಿಗೆ ಪಾಲು, ಅನುದಾನ ಹಂಚಿಕೆಯಲ್ಲಿ ಒಕ್ಕೂಟ ಸರಕಾರದಿಂದ ನಿರಂತರವಾಗಿ ತಾರತಮ್ಯವಾಗುತ್ತಿದ್ದು ಇದನ್ನು ಕೊನೆಗಾಣಿಸಬೇಕು. ಹಿಂದಿನ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳು ಮೊದಲು ಅನುಷ್ಠಾನಕ್ಕೆ ತರಬೇಕು. ರಾಜ್ಯದಲ್ಲಿ ಕನ್ನಡ ಬದುಕಿನ ಪ್ರಶ್ನೆಯಾಗಿದ್ದು ನಾಡಿನ ಜನತೆ ಅರಿತುಕೊಂಡು ಜನಾಂದೋಲನಕ್ಕೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಚಾಲಕರಾದ ಶೆ.ಬೊ.ರಾಧಾಕೃಷ್ಣ, ಹಿರಿಯ ಪತ್ರಕರ್ತ ಪಾರ್ವತೀಶ ಬಿಳಿದಾಳೆ, ಕನ್ನಡ ಪರ ಹೋರಾಟಗಾರ ಶಿವರಾಮೇಗೌಡ, ರೈತ ಮುಖಂಡ ವೀರಸಂಗಯ್ಯ, ಶ್ರೀನಿವಾಸ ಮೂರ್ತಿ ಮತ್ತಿತರರು ಉಪಸ್ಥಿತರಿದ್ದು.