ಬರುಗೂರು ಪ್ರಶಸ್ತಿ ಪ್ರಕಟ | ರಾಜೇಂದ್ರ ಸಿಂಗ್ ಬಾಬು ಸೇರಿ ನಾಲ್ವರು ಪ್ರಶಸ್ತಿಗೆ ಆಯ್ಕೆ
ಬೆಂಗಳೂರು : ನಾಡೋಜ ಡಾ. ಬರಗೂರು ಪ್ರತಿಷ್ಠಾನವು ನೀಡುವ 2023 ಮತ್ತು 2024ನೆ ಸಾಲಿನ ಬರಗೂರು ಪ್ರಶಸ್ತಿ ಪ್ರಕಟವಾಗಿದ್ದು, ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಡಾ. ಬಸವರಾಜ ಕಲ್ಗುಡಿ, ಸುಧಾರಾಣಿ, ಡಾ.ಕರಿಗೌಡ ಬೀಚನಹಳ್ಳಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬರಗೂರರ ಸೃಜನಶೀಲ ಕ್ಷೇತ್ರಗಳಾದ ಸಾಹಿತ್ಯ ಮತ್ತು ಸಿನಿಮಾದಲ್ಲಿ ಸಾಧನೆ ಮಾಡಿದ ತಲಾ ಒಬ್ಬರಿಗೆ ಪ್ರತಿ ವರ್ಷವೂ ಪ್ರಶಸ್ತಿಗಳನ್ನು ನೀಡುತ್ತಿದೆ. ಕನ್ನಡ ಸಿನಿಮಾ ಕ್ಷೇತ್ರಕ್ಕೆ ಸದಭಿರುಚಿಯ ಸಿನಿಮಾಗಳನ್ನು ನೀಡಿದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮತ್ತು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ ಡಾ.ಬಸವರಾಜ ಕಲ್ಗುಡಿ 2023ರ ಸಾಲಿನ ಬರಗೂರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕನ್ನಡ ಸಿನಿಮಾ ನಟಿ ಸುಧಾರಾಣಿ ಮತ್ತು ಸಾಹಿತಿ ಡಾ.ಕರೀಗೌಡ ಬೀಚನಹಳ್ಳಿ ಅವರು 2024ರ ಬರಗೂರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬರಗೂರು ಪ್ರಶಸ್ತಿ ಪಡೆದವರಿಗೆ ನಗದು ಹಾಗೂ ಪ್ರಶಸ್ತಿ ಫಲಕದೊಂದಿಗೆ ಅಭಿನಂದಿಸಲಾಗುವುದು.
ಪ್ರಶಸ್ತಿ ಪ್ರದಾನ ಸಮಾರಂಭವು ಡಿ.23ರಂದು ಸರಕಾರಿ ಕಲಾ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ನಡೆಯಲಿದೆ. ಹಿರಿಯ ವಿದ್ವಾಂಸರಾದ ಡಾ.ಹಂಪನಾ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.