ಅದ್ಧೂರಿಯಾಗಿ ಜರುಗಿದ ಮಹ್ರಜಾನ್ ಶೈಕ್ಷಣಿಕ ಸ್ಪರ್ಧಾ ಕಾರ್ಯಕ್ರಮ
ಮಾಸ್ಟರ್ಸ್ ವಿಭಾಗದಲ್ಲಿ ಮುಹಮ್ಮದ್ ಮುಫೀದ್ ಕೊಡ್ಲಿಪೇಟೆ ‘ಚಾಂಪಿಯನ್’
ಬೆಂಗಳೂರು : ಧಾರ್ಮಿಕ ಕ್ಷೇತ್ರದಲ್ಲಿನ ಪಾರಂಪರಿಕ ದರ್ಸ್ ಮತ್ತು ಲೌಕಿಕ ಸಮನ್ವಯ ವಿದ್ಯಾಭ್ಯಾಸ ಶಿಕ್ಷಣ ಸಂಸ್ಥೆಗಳ ಒಕ್ಕೂಟ ‘ಜಾಮೀಯತುಲ್ ಹಿಂದ್ ಅಲ್ ಇಸ್ಲಾಮಿಯ’ ಇದರ ಅಧೀನದಲ್ಲಿ ಆಯೋಜಿಸಲಾಗಿದ್ದ ‘ಮಹ್ರಜಾನ್; ದೇಶೀಯ ಶೈಕ್ಷಣಿಕ ಸ್ಪರ್ಧಾ ಕಾರ್ಯಕ್ರಮವು’ ಜ.11 ಮತ್ತು 12ರಂದು ಕೇರಳದ ಮಲಪ್ಪುರಂ ಜಿಲ್ಲೆಯ ಕೊಳತ್ತೂರಿನ ಪ್ರತಿಷ್ಠಿತ ಇರ್ಶಾದಿಯ್ಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅದ್ಧೂರಿಯಾಗಿ ಜರುಗಿತು.
ಅರೇಬಿಕ್ ಬರಹ, ಭಾಷಣ, ಅಧ್ಯಯನ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಹಾಗೂ ಭಾಷಾ ನೈಪುಣ್ಯತೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಹಾಗೂ ಒತ್ತನ್ನು ನೀಡುವ ಸಲುವಾಗಿ ಆಯೋಜಿಸಲಾಗಿದ್ದ ಈ ಮಹ್ರಜಾನ್ ಸ್ಪರ್ಧಾ ಕಾರ್ಯಕ್ರಮದಲ್ಲಿ ಜಾಮೀಯತುಲ್ ಹಿಂದ್ ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದಿರುವ 180ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳಲ್ಲಿ ಅಧ್ಯಯನ ನಡೆಸುತ್ತಿರುವ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕರ್ನಾಟಕದ ಪ್ರತಿಷ್ಠಿತ 10 ಧಾರ್ಮಿಕ ಮತ್ತು ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆಗಳಲ್ಲಿನ ವಿದ್ಯಾರ್ಥಿಗಳ ನಡುವೆ ಡಿ.24ರಂದು ಮೈಸೂರಿನ ಆಲ್ ನೂರ್ ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ ಕರ್ನಾಟಕ ವಲಯಾ ಮಟ್ಟದ ಮಹ್ರಜಾನ್ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನವನ್ನು ಪಡೆದ 46 ವಿದ್ಯಾರ್ಥಿಗಳು ದೇಶೀಯ ಮಟ್ಟದ ಮಹ್ರಜಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಹೈಯರ್ ಸೆಕೆಂಡರಿ, ಬ್ಯಾಚುಲರ್ ಹಾಗೂ ಮಾಸ್ಟರ್ಸ್ ಎಂಬ ಮೂರು ಗುಂಪುಗಳಲ್ಲಿ ನಡೆದ 51 ಸ್ಪರ್ಧೆಗಳಲ್ಲಿ 16 ವಿವಿಧ ವಲಯಗಳೊಂದಿಗೆ ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಇದರಲ್ಲಿ ಕರ್ನಾಟಕ ವಲಯದ ವಿದ್ಯಾರ್ಥಿಗಳು ಅತ್ಯುತ್ತಮ ಶ್ಲಾಘನೀಯ ಪ್ರದರ್ಶನ ನೀಡಿ, ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಪ್ರಕಟಣೆ ತಿಳಿಸಿದೆ.
ಮಾಸ್ಟರ್ಸ್ ವಿಭಾಗದಲ್ಲಿ ಮುಹಮ್ಮದ್ ಮುಫೀದ್ ಕೊಡ್ಲಿಪೇಟೆ ‘ಚಾಂಪಿಯನ್’
ಮಾಸ್ಟರ್ಸ್ ವಿಭಾಗದಲ್ಲಿ ನಡೆದ ಅರೇಬಿಕ್ ಪುಸ್ತಕ ಬರವಣಿಗೆ, ಅರೇಬಿಕ್ ಪುಸ್ತಕ ವಿಮರ್ಶೆ ಮತ್ತು ಅರೇಬಿಕ್ ಪುಸ್ತಕ ಓದುವಿಕೆ ಎಂಬ ಮೂರು ಸ್ಪರ್ಧೆಗಳಲ್ಲಿ 'ಎ' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಗಿಟ್ಟಿಸಿಕೊಂಡ ಕೊಡಗು ಜಿಲ್ಲೆಯ ಮರ್ಕಝುಲ್ ಹಿದಾಯ ಕೊಟ್ಟಮುಡಿ ಸಂಸ್ಥೆಯ ಅಂತಿಮ ವರ್ಷ ಪದವಿ ವಿದ್ಯಾರ್ಥಿ ಮುಹಮ್ಮದ್ ಮುಫೀದ್ ಕೊಡ್ಲಿಪೇಟೆ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದರು.