ಅಧಿವೇಶನ | ಗ್ಯಾರಂಟಿ ಅನುಷ್ಠಾನ ಸಮಿತಿ ರದ್ದತಿಗೆ ಪರಿಷತ್‍ನಲ್ಲಿ ಜಟಾಪಟಿ

ಬೆಂಗಳೂರು : ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕುರಿತಂತೆ ಗುರುವಾರ ವಿಧಾನಪರಿಷತ್‍ನ ಕಲಾಪದಲ್ಲಿ ಕೆಲಕಾಲ ಸದಸ್ಯರ ಮಾತಿನ ಜಟಾಪಟಿ ನಡೆಯಿತು. ಸಮಿತಿ ರಚನೆಯನ್ನು ವಿರೋಧಿಸಿ ಪ್ರತಿಪಕ್ಷಗಳು ವಿರೋಧಿಸಿದರೆ, ಆಡಳಿತ ಪಕ್ಷ ಸಮರ್ಥನೆಗೆ ಇಳಿಯಿತು.
ಪ್ರಶ್ತೋತರ ವೇಳೆ ಜೆಡಿಎಸ್ ಸದಸ್ಯ ಟಿ.ಎ.ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಎನ್.ಎಸ್.ಬೋಸರಾಜು, ನಾಲ್ಕು ಗ್ಯಾರಂಟಿ ಯೋಜನೆಗಳ ಬಗ್ಗೆ ಮೌಲ್ಯಮಾಪನ ಮಾಡಲು ಎಂಟೂಎಂ ಮೀಡಿಯಾ ನೆಟ್‍ವರ್ಕ್ ಕಂಪೆನಿಗೆ ಕೊಡಲಾಗಿದೆ. ಇದಕ್ಕಾಗಿ ಒಟ್ಟು 1.10 ಕೋಟಿ ರೂ. ವ್ಯಯಿಸಲಾಗಿದೆ. ಮೌಲ್ಯಮಾಪನ ನಡೆಸಲು ಅಜೀಂ ಪ್ರೇಮ್ ಜಿ ವಿ.ವಿ. ಸೇರಿದಂತೆ ನಾಲ್ಕು ಸಂಸ್ಥೆಗಳಿಗೆ ವಹಿಸಲಾಗಿದ್ದು, ಯಾವುದೇ ಅನುದಾನ ನೀಡಿಲ್ಲ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕತೆ ಅಧೀನ ಕೆಟಿಪಿಪಿ ಕಾಯ್ದೆ ವಿನಾಯಿತಿಯಲ್ಲಿ ಟೆಂಡರ್ ಕೊಡಲಾಗಿದೆ ಎಂದರು.
ಇದಕ್ಕೆ ಆಕ್ಷೇಪಿಸಿದ ಟಿ.ಎ.ಶರವಣ, ನಮ್ಮ ಪ್ರಶ್ನೆಗೆ ಸರಿಯಾಗಿ ಉತ್ತರಿಸದೆ ಸರಕಾರ ಮರೆಮಾಚಿದೆ ಎಂದು ಆಪಾದಿಸಿದರು. ಮಧ್ಯಪ್ರವೇಶಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗ್ಯಾರಂಟಿಗಳಿಂದ ರಾಜ್ಯಕ್ಕೆ ನಷ್ಟವೆಂದು ಬಿಜೆಪಿ ಆರೋಪಿಸಿತ್ತು. ಹಣ ಸರಿಯಾಗಿ ಜನರಿಗೆ ತಲುಪುತಿದೆಯಾ ಎಂದು ತಿಳಿಯುವುದಕ್ಕೆ ಕೆಲ ಏಜೆನ್ಸಿಗಳಿಗೆ ವಹಿಸಿದ್ದೆವು. ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ. ಮೀಸಲಿರಿಸಲಾಗಿದೆ. ಮೌಲ್ಯಮಾಪನ ನಡೆಸಲು ಶೇ.1ರಷ್ಟು ಖರ್ಚು ಮಾಡಿದರೆ ತಪ್ಪೇನು? ಎಂದು ಪ್ರಶ್ನಿಸಿದರು.
ಇನ್ನೂ ಗ್ಯಾರಂಟಿ ಅನುಷ್ಠಾನಕ್ಕಾಗಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಅನುಷ್ಠಾನ ಸಮಿತಿಗಾಗಿ ಕಾರ್ಯಕರ್ತರನ್ನು ನೇಮಕ ಮಾಡಿದ್ದೇವೆ. ಅವರಿಗೆ ವೇತನ ಪಾವತಿಸಲಾಗುತ್ತಿದೆ ಎಂದು ಹೇಳುತ್ತಿದ್ದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಪ್ರತಿಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದ ಹಣವನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ಏಕೆ ಕೊಡುತ್ತೀರಿ?, ಗ್ಯಾರಂಟಿ ಜನರಿಗೆ ಕೊಡಿ, ಕಾಂಗ್ರೆಸ್ ಕಾರ್ಯಕರ್ತರಿಗಲ್ಲ ಎಂದು ಪ್ರತಿಪಕ್ಷ ಸದಸ್ಯರು ವಿರೋಧಿಸಿದರು. ಈ ವೇಳೆ ಸಮರ್ಪಕ ಉತ್ತರ ನೀಡಿಲ್ಲವೆಂದು ಬಾವಿಗಿಳಿಯಲು ಪ್ರತಿಪಕ್ಷ ಮುಂದಾಯಿತು. ಆಗ ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಸರಕಾರ ನೀಡಿದ ಉತ್ತರ ಸಮಾಧಾನವಾಗದಿದ್ದರೆ ಈ ಬಗ್ಗೆ ಅರ್ಧಗಂಟೆ ಚರ್ಚೆ ರೂಪದಲ್ಲಿ ಪ್ರಸ್ತಾವನೆ ಸಲ್ಲಿಸಿ ಇದಕ್ಕೆ ಅನುಮತಿ ನೀಡುತ್ತೇನೆ. ಸಾಮೂಹಿಕವಾಗಿ ಎದ್ದು ನಿಂತು ಮಾತನಾಡಿದರೆ ಹೇಗೆ ಎಂದು ಆಕ್ಷೇಪಿಸಿದರು. ಆದ್ಯಾಗೂ ಆಡಳಿತ ಹಾಗೂ ಪ್ರತಿಪಕ್ಷಗಳು ಮಾತಿನ ಸಮರ ಮುಂದುವರೆಯಿತು.
ಈ ಹಿನ್ನೆಲೆ ಮಧ್ಯಪ್ರವೇಶಿಸಿದ ಡಿ.ಕೆ.ಶಿವಕುಮಾರ್, ಅನುಷ್ಠಾನ ಸಮಿತಿ ರಚನೆ ರಾಜಕೀಯವಾಗಿ ನಿರ್ಧಾರ ಮಾಡಿದ್ದು ನಿಜ. ನಿಮ್ಮ ರಾಜಕಾರಣ ನೀವು ಮಾಡಿ, ನಮ್ಮ ರಾಜಕಾರಣ ನಾವು ಮಾಡುತ್ತೇವೆ, ಇದಕ್ಕೆ ನಾವು ಸೊಪ್ಪು ಹಾಕುವುದಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದಂತೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದವು. ಇದಕ್ಕೆ ‘ನೀವು ಸೊಪ್ಪು ಹಾಕದಿದ್ದರೂ ಜನ ಸೊಪ್ಪು ಹಾಕುತ್ತಾರೆ’ ಎಂದು ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಕಿಚಾಯಿಸಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಅನುಷ್ಠಾನ ಸಮಿತಿ ರದ್ದು ಮಾಡುವಂತೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ಪಾಯಿಂಟ್ ಆಫ್ ಆರ್ಡರ್ ಎತ್ತಿದ ಸಿ.ಟಿ.ರವಿ, ಎಂಟೂಎಂ ಸಂಸ್ಥೆಗೆ 1 ಕೋಟಿ ಹಣ ನೀಡಲಾಗಿದೆ ಸರಿ. ರೈಟ್ಸ್ ಪೀಪಲ್ ಸಂಸ್ಥೆಗೆ 9.25 ಕೋಟಿ ರೂ. ಕೊಡಲಾಗಿದೆ. ಇದನ್ನು ಯಾಕೆ ಮುಚ್ಚಿಡಲಾಗಿದೆ? ಈ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಈ ವೇಳೆ ಅರ್ಧ ಗಂಟೆ ಚರ್ಚೆಗೆ ನೀಡುವುದಾಗಿ ತಿಳಿಸಿ ಸಭಾಪತಿ ಹೊರಟ್ಟಿ ವಾಕ್ಸಮರಕ್ಕೆ ತೆರೆ ಎಳೆದರು.