ಬೆಂಗಳೂರು | ವಿದ್ಯುತ್ ಸ್ಪರ್ಶಿಸಿ ಮಹಿಳೆ ಮೃತ್ಯು

ಸಾಂದರ್ಭಿಕ ಚಿತ್ರ
ಬೆಂಗಳೂರು: ವಿದ್ಯುತ್ ಸ್ಪರ್ಶಿಸಿ ಮಹಿಳೆ ಮೃತ ಪಟ್ಟಿರುವ ಘಟನೆ ಚಾಮರಾಜಪೇಟೆ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ಇಲ್ಲಿನ ವಿನಾಯಕ ಚಿತ್ರಮಂದಿರ ಹಿಂಭಾಗದ ಆನಂದಪುರ ಮೊದಲನೆ ಕ್ರಾಸ್ ನಿವಾಸಿ ಸೆಲ್ವಿ (58) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ.
ಗುರುವಾರ ಬೆಳಗಿನ ಜಾವ 3.30ರ ಸುಮಾರಿನಲ್ಲಿ ಸೆಲ್ವಿ ಅವರು ಕುಡಿಯುವ ನೀರು ಹಿಡಿಯುವ ಸಲುವಾಗಿ ಮೋಟರ್ ಆನ್ ಮಾಡುತ್ತಿದ್ದಂತೆ ವಿದ್ಯುತ್ ಸ್ಪರ್ಶಿಸಿದ ಪರಿಣಾಮ ಅವರು ಮೃತಪಟ್ಟಿದ್ದಾರೆ.ಈ ಬಗ್ಗೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇನ್ನೊಂದೆಡೆ, ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಘಟನೆಗೆ ಆಕ್ರೋಶ ಹೊರಹಾಕಿ ಮೈಸೂರು ರಸ್ತೆಯಲ್ಲಿ ಜಮಾಯಿಸಿ ಕೆಲ ಕಾಲ ಪ್ರತಿಭಟನೆ ನಡೆಸಿ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಪಟ್ಟು ಹಿಡಿದರು. ಅಲ್ಲದೇ ಸ್ಥಳಕ್ಕೆ ಸಚಿವರು ಬರಬೇಕೆಂದು ಒತ್ತಾಯಿಸಿದರು.
ಆಗ ಸಚಿವ ಝಮೀರ್ ಅಹ್ಮದ್ ಖಾನ್ ಅವರು ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಮನವೊಲಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ ತೆರಳಿದಾಗ ಪ್ರತಿಭಟನಾಕಾರರು ಸ್ಥಳದಿಂದ ಹಿಂದುರುಗಿದರು. ಈ ವೇಳೆ ಮೈಸೂರು ರಸ್ತೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕೆಲ ಕಾಲ ವಾಹನ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿತ್ತು.