ರೂಪಾಯಿ ಚಿಹ್ನೆ ಕನ್ನಡಕ್ಕೆ ಅನುಗುಣವಾಗಿ ಬದಲಿಸಿ : ನಾರಾಯಣಗೌಡ

ಬೆಂಗಳೂರು : ಕರ್ನಾಟಕ ಸರಕಾರವೂ ರೂಪಾಯಿ ಚಿಹ್ನೆಯನ್ನು ಕನ್ನಡ ಲಿಪಿಗೆ ಅನುಗುಣವಾಗಿ ಬದಲಾಯಿಸಬೇಕು. ಕರ್ನಾಟಕದಲ್ಲಿ ಅದನ್ನೇ ಬಳಕೆಗೆ ತರಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.
ಶುಕ್ರವಾರ ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ತಮಿಳುನಾಡು ಸರಕಾರ ರೂಪಾಯಿ ಚಿಹ್ನೆಯನ್ನು ತಮಿಳಿನಲ್ಲಿಯೇ ಸಿದ್ಧಪಡಿಸಿ ಅದನ್ನು ಬಳಸಲು ಆರಂಭಿಸಿದೆ. ತಮಿಳಿಗರ ಸ್ವಾಭಿಮಾನದ ರಾಜಕಾರಣಕ್ಕೆ ಇದು ಸಾಕ್ಷಿ. ತಮಿಳಿಗರು ತಮ್ಮ ಮೇಲೆ ಇನ್ನೊಂದು ನುಡಿ ಹೇರಿಕೆಯಾಗುವುದನ್ನು ಎಂದೂ ಸಹಿಸೋದಿಲ್ಲ ಎಂದು ತಮಿಳುನಾಡು ಸರಕಾರದ ನಡೆಯನ್ನು ಸ್ವಾಗತಿಸಿದ್ದಾರೆ.
ನಮ್ಮ ಅಸ್ಮಿತೆ ಇರುವುದು ಕನ್ನಡ ಲಿಪಿಯಲ್ಲಿ, ಇನ್ಯಾವುದೋ ದೇವನಾಗರಿ ಲಿಪಿಯಲ್ಲಿ ಅಲ್ಲ. ಹೀಗಾಗಿ ರೂಪಾಯಿಗೊಂದು ಕನ್ನಡದ ಚಿಹ್ನೆ ಸಿದ್ಧಪಡಿಸಬೇಕು ಎಂದು ಹೇಳಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಎಲ್ಲ ಪರೀಕ್ಷೆಗಳೂ ಕನ್ನಡದಲ್ಲೇ ನಡೆಯಬೇಕು ಎಂದು ಇತ್ತೀಚಿಗಷ್ಟೇ ಆಗ್ರಹಿಸಿದ್ದೆ. ವಿಶೇಷವೆಂದರೆ ನನ್ನ ಆಗ್ರಹವನ್ನು ಮರಾಠಿ ನುಡಿಗೆ ಅನ್ವಯಿಸಿ ಮಹಾರಾಷ್ಟ್ರ ಸರಕಾರ ಕಾಯ್ದೆ ರೂಪಿಸಿ ಜಾರಿ ಮಾಡಿದೆ. ಮಹಾರಾಷ್ಟ್ರ ಸರಕಾರದ ಸೇವೆಗೆ ಸಿಬ್ಬಂದಿ ನೇಮಕಕ್ಕೆ ನಡೆಯುವ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳನ್ನು ಮರಾಠಿಯಲ್ಲೇ ನಡೆಸುವ ಕಾಯ್ದೆ ಜಾರಿಯಾಗಿದೆ ಅದಕ್ಕಾಗಿ ಮಹಾರಾಷ್ಟ್ರ ಸರಕಾರವನ್ನು ಅಭಿನಂದಿಸಿದ್ದಾರೆ.
ಕರ್ನಾಟಕ ಸರಕಾರವೂ ಕೂಡಲೇ ಸೂಕ್ತ ಕಾನೂನು ರೂಪಿಸಿ ಕೆಪಿಎಸ್ಸಿ ಸೇರಿದಂತೆ ಕರ್ನಾಟಕ ಸರಕಾರದ ಸೇವೆಗೆ ನೇಮಕವಾಗುವ ಅಧಿಕಾರಿ, ನೌಕರರ ಆಯ್ಕೆಗೆ ನಡೆಯುವ ಎಲ್ಲ ಪರೀಕ್ಷೆಗಳನ್ನೂ ಕನ್ನಡದಲ್ಲೇ ನಡೆಸುವ ತೀರ್ಮಾನ ಕೈಗೊಳ್ಳಬೇಕು ಎಂದು ಮತ್ತೊಮ್ಮೆ ಆಗ್ರಹಿಸುತ್ತೇನೆ. ತಮ್ಮ ನುಡಿ, ಸಂಸ್ಕೃತಿಯನ್ನು ರಕ್ಷಿಸಲು ನೆರೆಯ ರಾಜ್ಯಗಳು ಕೈಗೊಳ್ಳುತ್ತಿರುವ ತೀರ್ಮಾನಗಳನ್ನು ನೋಡಿಯಾದರೂ ರಾಜ್ಯ ಸರಕಾರ ಕನ್ನಡ ಅಸ್ಮಿತೆ ಉಳಿಸಲು ಉತ್ತಮ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.