ಸ್ಮಾರ್ಟ್ ಮೀಟರ್ ಪೂರೈಕೆ ಕಂಪೆನಿಗಳು ಕಪ್ಪು ಪಟ್ಟಿಯಲ್ಲಿಲ್ಲ: ಕೆ.ಜೆ.ಜಾರ್ಜ್ ಸ್ಪಷ್ಟನೆ

ಬೆಂಗಳೂರು : ರಾಜ್ಯದಲ್ಲಿ ಕಪ್ಪು ಪಟ್ಟಿಗೆ ಸೇರಿದ ಕಂಪೆನಿಗಳು ಸ್ಮಾರ್ಟ್ ವಿದ್ಯುತ್ ಮೀಟರ್ ಪೂರೈಕೆ ಮಾಡುತ್ತಿವೆ ಎನ್ನುವ ಬಿಜೆಪಿಗರ ಆರೋಪ ಸಂಪೂರ್ಣ ತಪ್ಪು. ಮೀಟರ್ ಪೂರೈಕೆ ಮಾಡುತ್ತಿರುವ ಕಂಪೆನಿಗಳು ಕಪ್ಪು ಪಟ್ಟಿಯಲ್ಲಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತರ ಪ್ರದೇಶ ಸರಕಾರ ಎರಡು ವರ್ಷಗಳ ಕಾಲ ಕಂಪೆನಿಯನ್ನು ನಿರ್ಬಂಧಿಸಿದೆ ಆದರೆ, ಆ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿಲ್ಲ. ಇತರ 16 ರಾಜ್ಯಗಳು ಈ ಕಂಪೆನಿಗೆ ಗುತ್ತಿಗೆ ನೀಡಿವೆ ಎಂದರು.
ಸ್ಮಾರ್ಟ್ ಮೀಟರ್ ಪೂರೈಕೆಗೆ ಬೆಸ್ಕಾಂನವರು ಟೆಂಡರ್ ಕರೆದಿದ್ದಾರೆ. ಮೂರು ವಿಭಾಗಗಳಲ್ಲಿ ಟೆಂಡರ್ ಕರೆದಿದ್ದಾರೆ. ಒಬ್ಬರು ಸ್ಮಾರ್ಟ್ ಮೀಟರ್ ಅಳವಡಿಸುತ್ತಾರೆ. ಸಿಮ್ ಕಾರ್ಡ್ ಹಾಕುವವರು ಬೇರೆ ಇರುತ್ತಾರೆ. ಟೆಂಡರ್ ಕೊಟ್ಟಿರುವುದರಲ್ಲಿ ತಪ್ಪಾಗಿದ್ದರೆ ತಡೆಯುತ್ತೇವೆ ಎಂದು ಕೆ.ಜೆ.ಜಾರ್ಜ್ ಹೇಳಿದರು.
ಹೊಸ, ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಕಡ್ಡಾಯ: ರಾಜ್ಯದಲ್ಲಿ ಹೊಸ ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ. ಕೇಂದ್ರ ಇಂಧನ ಸಚಿವಾಲಯವು ಫೆ.22ರಂದು ಹೊರಡಿಸಿದ್ದ ಅಧಿಸೂಚನೆಯನ್ವಯ ಕರ್ನಾಟಕ ಮತ್ತು ತೆಲಂಗಾಣ ಬಿಟ್ಟು ಬೇರೆ ಎಲ್ಲಾ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ಜಾರಿಗೆ ತರಲಾಗಿತ್ತು. ಇತ್ತೀಚಿಗೆ ಕೇಂದ್ರ ಇಂಧನ ಸಚಿವರನ್ನು ಭೇಟಿ ಮಾಡಿದಾಗ ಸ್ಮಾರ್ಟ್ ಮೀಟರ್ ಅಳವಡಿಸಲು ಸೂಚಿಸಿದರು ಎಂದು ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.