'ಸತ್ಯವತಿ ವಿಜಯರಾಘವ ಚಾರಿಟೇಬಲ್ ಟ್ರಸ್ಟ್ ಧರ್ಮದರ್ಶಿಗಳ' ದತ್ತಿ ಪ್ರಶಸ್ತಿ; ಗುರುದೇವ ನಾರಾಯಣ ಕುಮಾರ, ರಝಿಯಾ ಆಯ್ಕೆ

ಗುರುದೇವ ನಾರಾಯಣ ಕುಮಾರ, ರಝಿಯಾ
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ನ ಪ್ರಶಸ್ತಿಗಳಲ್ಲೊಂದಾದ 'ಸತ್ಯವತಿ ವಿಜಯರಾಘವ ಚಾರಿಟೇಬಲ್ ಟ್ರಸ್ಟ್ ಧರ್ಮದರ್ಶಿಗಳ ದತ್ತಿ ಪ್ರಶಸ್ತಿಗೆ ಕನ್ನಡ ಹೋರಾಟಗಾರ ಗುರುದೇವ ನಾರಾಯಣ ಕುಮಾರ ಮತ್ತು ಲೇಖಕಿ ಡಿ.ಬಿ.ರಝಿಯಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ತಿಳಿಸಿದ್ದಾರೆ.
ಬುಧವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನಪದದ ಜೊತೆಗೆ ಕನ್ನಡ-ಕನ್ನಡಿಗ-ಕರ್ನಾಟಕ ಇವುಗಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ನ ಮೇಲಿನ ಗೌರವದಿಂದ ಮೈಸೂರಿನ ಡಾ.ಎ.ಪುಷ್ಪಾ ಅಯ್ಯಂಗಾರ್ ಅವರು 'ಸತ್ಯವತಿ ವಿಜಯರಾಘವ ಚಾರಿಟಬಲ್ ಟ್ರಸ್ಟ್ ಧರ್ಮದರ್ಶಿ'ಗಳ ಹೆಸರಿನಲ್ಲಿ ಕಸಾಪದಲ್ಲಿ ದತ್ತಿ ನಿಧಿ ಇರಿಸಿದ್ದಾರೆ.
ಕನ್ನಡ ನಾಡು, ನುಡಿ, ಜಲ ಕುರಿತ ಚಿಂತಕರು, ಕನ್ನಡ ಪರ ಹೋರಾಟಗಾರರು ಅಥವಾ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದ ಇಬ್ಬರಿಗೆ ಪ್ರತೀ ವರ್ಷ ಪುರಸ್ಕಾರ ನೀಡಬೇಕೆಂಬುದು ದತ್ತಿದಾನಿಗಳ ಆಶಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಆಯ್ಕೆ ಸಮಿತಿಯು ಪಾರದರ್ಶಕವಾಗಿ ಪರಿಶೀಲಿಸಿ ಗುರುದೇವ ನಾರಾಯಣ ಕುಮಾರ ಮತ್ತು ಲೇಖಕಿ ಡಿ.ಬಿ.ರಝಿಯಾರನ್ನು ಆಯ್ಕೆ ಮಾಡಿದೆ. ಆಯ್ಕೆ ಸಮಿತಿಯಲ್ಲಿ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ, ಡಾ.ಪದ್ಮನಿ ನಾಗರಾಜು, ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು ಭಾಗವಹಿಸಿದ್ದರು ಎಂದು ಮಹೇಶ್ ಜೋಶಿ ತಿಳಿಸಿದ್ದಾರೆ.