ಕಾಂಗ್ರೆಸ್ ನವರು ದಲಿತರನ್ನು ತುಳಿದುಕೊಂಡೇ ಬಂದಿದ್ದಾರೆ: ಆರ್.ಅಶೋಕ್ ಆರೋಪ

ಬೆಂಗಳೂರು, ಎ.11: ಕಾಂಗ್ರೆಸ್ ನವರು ಹಲವಾರು ವರ್ಷಗಳ ಕಾಲ ದಲಿತರನ್ನು ತುಳಿದುಕೊಂಡೇ ಬಂದಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ವಿಧಾನಸೌಧದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ “ಭೀಮ ಹೆಜ್ಜೆ 100 ರ ಸಂಭ್ರಮ” ಕಾರ್ಯಕ್ರಮದ ಉದ್ಘಾಟನೆಯಲ್ಲಿ ಅವರು ಪಾಲ್ಗೊಂಡು ಮಾತನಾಡುತ್ತಿದ್ದರು.
ದಲಿತರ ಬಗ್ಗೆ ಮಾತಾಡುವಾಗಲೆಲ್ಲ ಅವರು ತುಳಿತಕ್ಕೆ ಒಳಗಾದವರು ಎಂದು ಹೇಳುತ್ತೇವೆ. ಆದರೆ ಈ ರೀತಿ ತುಳಿದವರು ಯಾರು ಎಂದು ಪ್ರಶ್ನೆ ಮಾಡಿದರೆ, ಕಾಂಗ್ರೆಸ್ ನವರೇ ಎಂಬ ಉತ್ತರ ಸಿಗುತ್ತದೆ. ಇಷ್ಟು ವರ್ಷ ಶೋಷಿತರನ್ನು ಕಾಂಗ್ರೆಸ್ ನವರೇ ತುಳಿದಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕಾಂಗ್ರೆಸ್ ನವರು ದಲಿತರನ್ನು ಉದ್ಧಾರ ಮಾಡಲಿಲ್ಲ ಎಂದು ಆಪಾದಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ರ ಹೆಸರನ್ನು ಕಾಂಗ್ರೆಸ್ ನವರು ದುರುಪಯೋಗ ಮಾಡಿಕೊಂಡರು. ನರೇಂದ್ರ ಮೋದಿ ಪ್ರಧಾನಿಯಾದ ಬಳಿ ಅಂಬೇಡ್ಕರರ ಜೀವನದ ಪ್ರಮುಖ ಸ್ಥಳಗಳನ್ನು ಪಂಚತೀರ್ಥವೆಂದು ಯಾತ್ರಾ ಸ್ಥಳವಾಗಿಸಿದರು. ಕಾಂಗ್ರೆಸ್ ನಾಯಕರು ತಾವು ದಲಿತರ ಪರ ಎಂದು ಹೇಳುತ್ತಾರೆ. ಆದರೆ ದಲಿತರಿಗೆ ಮೋಸ ಮಾಡುತ್ತಾರೆ ಎಂದು ಅಶೋಕ್ ದೂರಿದರು.
ವಕ್ಫ್ ಮಂಡಳಿ ಲಕ್ಷಾಂತರ ದಲಿತರ ಆಸ್ತಿಗಳನ್ನು ಲೂಟಿ ಮಾಡಿದೆ. ವಕ್ಫ್ನಿಂದಾದ ಭೂ ಕಬಳಿಕೆ ಬಗ್ಗೆ ನಾನು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾಗ, ದೂರು ಹೇಳಿಕೊಳ್ಳಲು ಬರುತ್ತಿದ್ದವರಲ್ಲಿ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಿದ್ದರು. ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆಗೆ ವಿರುದ್ಧವಾಗಿ ಕಾಂಗ್ರೆಸ್ ನಿಂತುಕೊಳ್ಳುತ್ತದೆ ಎಂಬುದರಲ್ಲೇ ಅವರ ದಲಿತರ ಕಾಳಜಿ ಅರ್ಥವಾಗುತ್ತದೆ. ಸಂವಿಧಾನ ಉಳಿಯಬೇಕು, ಕಾಂಗ್ರೆಸ್ನ ಪೊಳ್ಳು ಭರವಸೆಗಳು ಹೋಗಬೇಕು ಎಂದರು.