ಬೆಂಗಳೂರಿನಲ್ಲಿ ಸುಪ್ರೀಂ ಕೋರ್ಟ್ ಬೆಂಚ್ ಸ್ಥಾಪನೆಗೆ ಒತ್ತಾಯ
ಸುಪ್ರೀಂ ಕೋರ್ಟ್ | PC: PTI
ಬೆಂಗಳೂರು : ನಗರದಲ್ಲಿ ಸುಪ್ರೀಂ ಕೋರ್ಟ್ ಬೆಂಚ್ ಸ್ಥಾಪನೆ ಮಾಡಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ(ಕೆಪಿಸಿಸಿ) ಸದಸ್ಯ ಹಾಗೂ ಮಾಜಿ ಕಾರ್ಯದರ್ಶಿ ಎಸ್. ಮೋಹನದಾಸ್ ಹೆಗ್ಡೆ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ಗುರುವಾರ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಅವರು, ದಕ್ಷಿಣ ಭಾರತದ ನಾಗರಿಕರಿಗೆ ನ್ಯಾಯದ ಸುಲಭ ಪ್ರವೇಶವನ್ನು ಒದಗಿಸುವ ಜೊತೆಗೆ, ರಾಷ್ಟ್ರೀಯ ಏಕತೆ, ಪ್ರಾದೇಶಿಕ ಸಮಾನತೆ ಮತ್ತು ಶಾಶ್ವತ ಅಭಿವೃದ್ಧಿಯನ್ನು ಬಲಪಡಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಸುಪ್ರೀಂ ಕೋರ್ಟ್ ಬೆಂಚ್ ಅನ್ನು ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಶಾಶ್ವತ ಸುಪ್ರೀಂ ಕೋರ್ಟ್ ಬೆಂಚ್ ಸ್ಥಾಪನೆಯು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಐತಿಹಾಸಿಕ ಹೆಜ್ಜೆಯಾಗುತ್ತದೆ. ಅಲ್ಲದೆ, ದಕ್ಷಿಣ ಭಾರತದ ರಾಜ್ಯಗಳ ನಾಗರಿಕರು, ವಕೀಲರಿಗೆ ಅನುಕೂಲವಾಗುತ್ತದೆ. ಜಿಲ್ಲಾಮಟ್ಟದ ನಾಗರಿಕರಿಗೆ ದಿಲ್ಲಿಗೆ ಪ್ರಯಾಣ ಮಾಡುವ ಆರ್ಥಿಕ, ಭೌತಿಕ ಹಾಗೂ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಿ, ನ್ಯಾಯವನ್ನು ಶೀಘ್ರವಾಗಿ ಒದಗಿಸುತ್ತದೆ ಎಂದರು.