ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದಕ್ಕೆ ಬ್ರಾಹ್ಮಣರ ಆಕ್ರೋಶ: ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಸರಕಾರ
ಸಾಂದರ್ಭಿಕ ಚಿತ್ರ | PC: pexels
ಬೆಂಗಳೂರು : ಸಿಇಟಿ ಪರೀಕ್ಷೆ ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿ ಕೇಂದ್ರದೊಳಗೆ ಪ್ರವೇಶಕ್ಕೆ ಅವಕಾಶ ನೀಡಿದ್ದಾರೆ ಎನ್ನುವ ವಿಚಾರಕ್ಕೆ ಬ್ರಾಹ್ಮಣ ಸಮುದಾಯದ ಸಂಘಟನೆಗಳು, ಮುಖಂಡರು ತೀವ್ರ ಆಕ್ರೋಶ ಹೊರಹಾಕಿದ ಬೆನ್ನಲ್ಲೇ ರಾಜ್ಯ ಸರಕಾರ ಜಿಲ್ಲಾಧಿಕಾರಿಗಳಿಗೆ ಈ ಕುರಿತು ಸಮಗ್ರ ವರದಿ ನೀಡುವಂತೆ ಸೂಚಿಸಿದೆ.
ಜನಿವಾರ ಹಾಕಿಕೊಂಡಿದ್ದಾರೆ ಎನ್ನುವ ಕಾರಣಕ್ಕೆ ಬೀದರ್ನಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆಯಲು ನಿರಾಕರಿಸಿದ್ದು ಹಾಗೂ ಶಿವಮೊಗ್ಗದಲ್ಲಿ ಜನಿವಾರ ತೆಗೆಸಿ, ಪರೀಕ್ಷೆಗೆ ಅವಕಾಶ ನೀಡಿದ ಎರಡೂ ಪ್ರತ್ಯೇಕ ಪ್ರಕರಣಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದೆ.
ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಸಮಗ್ರ ವರದಿ ನೀಡುವಂತೆ ಸೂಚಿಸಿದ್ದಾರೆ.ಅದೇ ರೀತಿ, ವಸ್ತ್ರ ಸಂಹಿತೆಯಲ್ಲಿ ಎಲ್ಲಿಯೂ ಜನಿವಾರ ತೆಗೆಸಬೇಕೆಂದು ಹೇಳಿರಲಿಲ್ಲ. ಆದರೂ ಎರಡು ಕೇಂದ್ರಗಳಲ್ಲಿ ಈ ರೀತಿಯ ಅಧಿಕ ಪ್ರಸಂಗ ಮಾಡಿರುವುದು ಖಂಡನೀಯ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಅವರು ಉಲ್ಲೇಖಿಸಿದ್ದಾರೆ.
ಜನಿವಾರದ ಕಾರಣಕ್ಕೆ ಬೀದರ್ನ ವಿದ್ಯಾರ್ಥಿ ಗಣಿತ ಪರೀಕ್ಷೆ ಬರೆದಿಲ್ಲ. ಹೀಗಾಗಿ ಆ ವಿದ್ಯಾರ್ಥಿ ನಿಯಮ ಪ್ರಕಾರ ಎಂಜಿನಿಯರಿಂಗ್ ರಾಂಕ್ ಪಡೆಯಲು ಅರ್ಹನಾಗುವುದಿಲ್ಲ. ಅವನದಲ್ಲದ ತಪ್ಪಿಗೆ ಅವನಿಗೆ ಶಿಕ್ಷೆ ವಿಧಿಸುವುದು ಸರಿಯಲ್ಲ. ಹೀಗಾಗಿ ವಿದ್ಯಾರ್ಥಿಗೆ ಅನ್ಯಾಯವಾಗದ ಹಾಗೆ ಏನೆಲ್ಲ ಮಾಡಬಹುದು ಎಂಬುದನ್ನು ಉನ್ನತ ಶಿಕ್ಷಣ ಸಚಿವರ ಜತೆ ಚರ್ಚಿಸಿ, ಸೂಕ್ತವಾದ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಸಿಇಟಿ ನಡೆಸುವ ಸಂಪೂರ್ಣ ಜವಾಬ್ದಾರಿ ಆಯಾ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳದ್ದಾಗಿರುತ್ತದೆ. ಯಾವ ರೀತಿ ಮಾಡಬೇಕು, ಯಾವುದಕ್ಕೆಲ್ಲ ನಿಷೇಧ ಇತ್ಯಾದಿ ವಿಷಯಗಳ ಬಗ್ಗೆ ಮೊದಲೇ ತರಬೇತಿ ಕೂಡ ನೀಡಲಾಗಿರುತ್ತದೆ. ಜತೆಗೆ ಲಿಖಿತವಾಗಿಯೂ ತಿಳಿಸಲಾಗುತ್ತದೆ. ಆದರೂ ಈ ರೀತಿ ಮಾಡಿರುವುದು ನೋವಿನ ಸಂಗತಿ. ಯಾವುದೇ ಧರ್ಮ, ಜಾತಿಯವರಿಗೆ ಘಾಸಿಯಾಗುವ ಯಾವ ತೀರ್ಮಾನವನ್ನೂ ಕೆಇಎ ಕೈಗೊಳ್ಳುವುದಿಲ್ಲ. ನಮ್ಮದೇನಿದ್ದರೂ ವಿದ್ಯಾರ್ಥಿ ಕೇಂದ್ರಿತ ತೀರ್ಮಾನ ಎಂದು ಅವರು ಸ್ಪಷ್ಟಪಡಿಸಿದರು.
ಆಕ್ರೋಶ: ಜನಿವಾರ ಹಾಕಿದ್ದನ್ನು ಆಕ್ಷೇಪಿಸಿ ಸಿಇಟಿಯಂತಹ ಮಹತ್ವದ ಪರೀಕ್ಷೆಯಿಂದ ವಂಚಿತಗೊಳಿಸಿ ವಿದ್ಯಾರ್ಥಿಯ ಭವಿಷ್ಯದ ಜೊತೆಗೆ ಚೆಲ್ಲಾಟವಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಒತ್ತಾಯಿಸಿದೆ.
ಈ ಘಟನೆ ನನ್ನ ಜಿಲ್ಲೆಯಲ್ಲಿ ಆಗಿರುವುದರಿಂದ ಕ್ರಮಕ್ಕೆ ಸೂಚನೆ ನೀಡುತ್ತೇವೆ. ವಿದ್ಯಾರ್ಥಿಗಳ ವಿಚಾರದಲ್ಲಿ ಈ ರೀತಿ ಮಾಡುವುದು ಸರಿಯಲ್ಲ. ಇಂಥ ಸೂಚನೆಯನ್ನು ಅಧಿಕಾರಿಗಳಿಗೆ ಕೊಟ್ಟಿಲ್ಲ. ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಆ ನಂತರ ಕ್ರಮ ಕೈಗೊಳ್ಳುತ್ತೇವೆ, ವಿದ್ಯಾರ್ಥಿ ಮರುಪರೀಕ್ಷೆ ಬರೆಯುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಸಚಿವರಾದ ಎಂ.ಸಿ.ಸುಧಾಕರ್ ಜೊತೆ ಇದರ ಬಗ್ಗೆ ಚರ್ಚಿಸುತ್ತೇನೆ.
-ಮಧು ಬಂಗಾರಪ್ಪ, ಶಿಕ್ಷಣ ಸಚಿವ
ಎಲ್ಲ ಜಾತಿ, ಧರ್ಮಗಳ ಆಚರಣೆ, ಸಂಪ್ರದಾಯಗಳಿಗೆ ಗೌರವ ಕೊಡಬೇಕು. ಈ ವಿಚಾರವಾಗಿ ರಾಜಕೀಯ ಲಾಭ ಮಾಡುವುದಲ್ಲ. ಯಾವುದೇ ಸಮುದಾಯವನ್ನು ನೋಯಿಸುವ ಉದ್ದೇಶ ನಮ್ಮದಲ್ಲ. ನಾನೇ ಇದನ್ನು ಖಂಡಿಸುತ್ತೇನೆ. ಎಲ್ಲರ ಭಾವನೆಗಳನ್ನೂ ನಾವು ಗೌರವಿಸುತ್ತೇವೆ.
-ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಸಚಿವ
15 ನಿಮಿಷದಲ್ಲಿ ಹೇಗೆ ಪರೀಕ್ಷೆ ಬರೆಯಲು ಸಾಧ್ಯ?: ಪರೀಕ್ಷಾ ಕೊಠಡಿಗೆ ಹೋಗುವಾಗ ಅಲ್ಲಿ ಜನಿವಾರ ತೆಗೆಯುವಂತೆ ಹೇಳಿದ್ದಾರೆ. ಅದಕ್ಕೆ ನನ್ನ ಮಗ ಇದನ್ನು ತೆಗೆಯುವಂತಿಲ್ಲ ಎಂದಿದ್ದಾನೆ. ಅದಕ್ಕವರು ಜನಿವಾರ ತೆಗೆದಿಟ್ಟು ಬಾ ಎಂದಿದ್ದಾರೆ. ಆಗ ಇವನು ಪರೀಕ್ಷೆಗೆ ಸಮಯವಾಗಿದೆ, ಒಳಗೆ ಬಿಡಿ ಎಂದು ಬೇಡಿಕೊಂಡಿದ್ದಾನೆ. ಆದರೂ ಅವರು ಪರೀಕ್ಷೆ ಬರೆಯಲು ಬಿಟ್ಟಿಲ್ಲ. ನಂತರ ಅಳುತ್ತಾ ಮನೆಗೆ ಬಂದು ನನಗೆ ನಡೆದ ವಿಷಯ ಹೇಳಿದ. ನಂತರ ಅಲ್ಲಿಗೆ ಹೋಗಿ ಕೇಳಿಕೊಂಡಾಗ ಅನುಮತಿಸುವುದಾಗಿ ಹೇಳಿದರು. 15 ನಿಮಿಷದಲ್ಲಿ ಹೇಗೆ ಪರೀಕ್ಷೆ ಬರೆಯಲು ಸಾಧ್ಯ?. ಒಂದು ಪೇಪರ್ ಬರೆಯಲು ಆಗಿಲ್ಲ. ನಮಗೆ ನ್ಯಾಯ ಬೇಕು ಎಂದು ಬೀದರ್ ನಗರದ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ವಿಷಯವಾಗಿ ನಡೆದ ಘಟನೆಯ ಬಗ್ಗೆ ವಿದ್ಯಾರ್ಥಿಯ ತಾಯಿ ನೀತಾ ಕುಲಕರ್ಣಿ ಪ್ರಶ್ನಿಸಿದ್ದಾರೆ.