ವಿಪಕ್ಷಗಳು ಏನೇ ಹೇಳಿದರೂ ಕಾಂಗ್ರೆಸ್ ಸರಕಾರಕ್ಕೆ ನಾಟುವುದಿಲ್ಲ: ವಿಜಯೇಂದ್ರ

ಬೆಂಗಳೂರು: ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಕಾಯಕ ಸಮುದಾಯಗಳಿಗೆ ಆರ್ಥಿಕ ಶಕ್ತಿ ಕೊಟ್ಟು ಅವರನ್ನು ಮುಂದಕ್ಕೆ ತರುವ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಸ್ಲಿಮರನ್ನು ಓಲೈಸಲು ಹೊರಟ ಕಾಂಗ್ರೆಸ್ ಸರಕಾರವು, ಇತರರೆಲ್ಲರಿಗೂ ಅನ್ಯಾಯ ಮಾಡಲು ಹೊರಟಿದೆ ಎಂದು ಆಕ್ಷೇಪಿಸಿದರು. ಸಿದ್ದರಾಮಯ್ಯನವರು ನಿಜವಾಗಿಯೂ ಅಹಿಂದ ನಾಯಕರೇ ಆಗಿದ್ದರೆ ಇಷ್ಟೊತ್ತಿಗೆ ಅನೇಕ ಹಿಂದುಳಿದ ಸಮಾಜಗಳಿಗೆ ಆರ್ಥಿಕ ಶಕ್ತಿ ತುಂಬಬೇಕಿತ್ತು. ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ನೀವು ಕೈ ಜೋಡಿಸಬೇಕಿತ್ತು. ಮಡಿವಾಳರು, ಸವಿತಾ ಸಮಾಜ ಸೇರಿ ಅನೇಕ ಕಾಯಕ ಸಮುದಾಯಗಳು ನಾಡಿನಲ್ಲಿವೆ ಎಂದರು.
ಅಲ್ಪಸಂಖ್ಯಾತರಿಗೆ ಶೇ 4ರಷ್ಟು ಮೀಸಲಾತಿಯ ನಿರ್ಧಾರ ತೆಗೆದುಕೊಳ್ಳಲು ಹೊರಟಿದ್ದಾರೆ. ಅಲ್ಪಸಂಖ್ಯಾತರು ಎಂದರೆ ಮುಸ್ಲಿಮರು ಮಾತ್ರವೇ? ಬೇರೆ ಯಾರೂ ಇಲ್ಲವೇ ಎಂದು ಕೇಳಿದರು. ಈ ಕಾಂಗ್ರೆಸ್ ಸರಕಾರದ ಅಲ್ಪಸಂಖ್ಯಾತರ ತುಷ್ಟೀಕರಣದ ನೀತಿಯಿಂದ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಲು ಹೊರಟಿದ್ದಾರೆ ಎಂದು ಆಕ್ಷೇಪಿಸಿದರು.
ರಾಜ್ಯ ಸರಕಾರವು ಮುಸ್ಲಿಮರ ಓಲೈಕೆ ಮಾಡಲು ಹೊರಟಿದೆ. ಜನರೇ ಇವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಕಾಂಗ್ರೆಸ್ ನಾಯಕರು ಭಂಡರಿದ್ದಾರೆ. ದಪ್ಪ ಚರ್ಮ ಬೆಳೆಸಿಕೊಂಡಿದ್ದಾರೆ. ವಿಪಕ್ಷಗಳು ಏನೇ ಹೇಳಿದರೂ ಇವರಿಗೆ ನಾಟುವುದಿಲ್ಲ. ಈ ನಿರ್ಧಾರವನ್ನು ನಾವು ಸದನದಲ್ಲಿ ಪ್ರಶ್ನಿಸುತ್ತೇವೆ ಎಂದರು.
ಇವರ ಯೋಗ್ಯತೆಗೆ ಕಳೆದ 20 ತಿಂಗಳಿನಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಕೊಟ್ಟಿಲ್ಲ. ಯಾವುದೇ ಶಾಸಕರ ವಿಧಾನಸಭಾ ಕ್ಷೇತ್ರಕ್ಕೆ ಅಭಿವೃದ್ಧಿಗೆ ಹಣ ಕೊಡಲು ಸಾಧ್ಯವಾಗಿಲ್ಲ. ಪರಿಶಿಷ್ಟ ಜಾತಿ, ಪಂಗಡಗಳಿಗೆ ಸರಕಾರಿ ಗುತ್ತಿಗೆಯಲ್ಲಿ ಮೀಸಲಾತಿ ಕೊಟ್ಟಿದ್ದಾರೆ. ಆದರೆ ಇವತ್ತು ಎಲ್ಲಿ ಕೆಲಸ ನಡೆಯುತ್ತಿದೆ ಎಂದು ಪ್ರಶ್ನಿಸಿದರು.
ಜಾತಿ ಹೆಸರು ಹೇಳಿ ರಾಜಕಾರಣ ಮಾಡುತ್ತಿರುವವರು, ಮಾಡಿದವರು ಕೇವಲ ಶಾಸಕರಾಗಿ, ಮಾಜಿ ಸಚಿವರಾಗಿ ಉಳಿದುಕೊಂಡಿದ್ದಾರೆ. ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲ ಸಮಾಜಗಳ ಧ್ವನಿಯಾಗಿ ಹೋರಾಟ ಮಾಡಿದ ಯಡಿಯೂರಪ್ಪ ಅವರಂಥ ನಾಯಕರು 4 ಬಾರಿ ಮುಖ್ಯಮಂತ್ರಿಯಾಗಿ ಮಾಜಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.