ಕಳಪೆ ಗುಣಮಟ್ಟದ ಚುಚ್ಚುಮದ್ದುಗಳ ನಿಷೇಧಕ್ಕೆ ಆಗ್ರಹಿಸಿ ಬರೆದ ಪತ್ರಕ್ಕೆ ಕೇಂದ್ರದಿಂದ ಇದುವರೆಗೂ ಪ್ರತಿಕ್ರಿಯೆ ಬಂದಿಲ್ಲ: ಸಚಿವ ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್
ಬೆಂಗಳೂರು: ಕಳಪೆ ಗುಣಮಟ್ಟದ ಚುಚ್ಚುಮದ್ದುಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಕೇಂದ್ರ ಸರಕಾರಕ್ಕೆ ಬರೆದಿದ್ದ ಪತ್ರಕ್ಕೆ ಇದುವರೆಗೂ ಕೇಂದ್ರದಿಂದ ಪ್ರತಿಕ್ರಿಯೆ ಬಂದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಾಣಂತಿಯರ ಸಾವಿಗೆ ಕಾರಣವಾದ ಐವಿ ದ್ರಾವಣ ಬಗ್ಗೆಯೂ ಈ ಹಿಂದೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿತ್ತು. ಈಗ ಗುಣಮಟ್ಟ ಕಾಯ್ದುಕೊಳ್ಳದ 9 ಚುಚ್ಚುಮದ್ದುಗಳನ್ನು ನಿಷೇಧ ಮಾಡುವಂತೆ ಪತ್ರ ಬರೆಯಲಾಗಿದೆ. ಆದರೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.
ಕೆಲವು ಕಂಪೆನಿಗಳು ಗುಣಮಟ್ಟದ ಔಷಧಿಗಳನ್ನು ಪೂರೈಸುತ್ತವೆ. ಇನ್ನೂ ಕೆಲವು ಕಂಪೆನಿಗಳು ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ, ಅಂತಹ ಔಷಧಿಗಳನ್ನು ಈಗಾಗಲೇ ನಿಷೇಧ ಮಾಡಲಾಗಿದೆ. ಹಾಗೆಯೇ ರಾಜ್ಯದಲ್ಲಿ ಬಾಣಂತಿಯರ ಸಾವಿಗೆ ಕಾರಣವಾದ ಐವಿ ದ್ರಾವಣ ತಯಾರಿಸಿದ ಪಶ್ಚಿಮ ಬಂಗಾಳದ ಕಂಪೆನಿ ಮುಚ್ಚಿದೆ ಎಂದು ಅವರು ತಿಳಿಸಿದರು.
ಕಳಪೆ ಗುಣಮಟ್ಟದ ಔಷಧಿಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ. ಜೊತೆಗೆ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುವುದರಿಂದ ಔಷಧಿ ಕಂಪೆನಿಗಳು ಗುಣಮಟ್ಟ ಕಾಯ್ದುಕೊಳ್ಳಬೇಕು. ಹೀಗಾಗಿ ಕಳಪೆ ಔಷಧಿಗಳ ಬಗ್ಗೆ ಹೆಚ್ಚು ಗಮನ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಕುಂಭಮೇಳದಲ್ಲಿ ಕಾಲ್ತುಳಿತವಾಗಿ ಜನರು ಮೃತಪಟ್ಟಿದ್ದಾರೆ. ದಿಲ್ಲಿಯ ರೈಲ್ವೆ ಸ್ಟೇಷನ್ನಲ್ಲಿ ದುರ್ಘಟನೆಯಾಗಿ ಜನ ಸಾವನ್ನಪ್ಪಿದ್ದರು. ನಿಗಧಿತ ಪ್ರಮಾಣಕ್ಕಿಂತ ಹೆಚ್ಚಿನ ಟಿಕೇಟ್ ಹಂಚಿದವರು ಯಾರು? ಈ ಬಗ್ಗೆ ವಿಚಾರ ಮಾಡಲಿಲ್ಲ. ಸರಕಾರ ಸತ್ತವರ ಬಗ್ಗೆಯೂ ಮಾಹಿತಿಯನ್ನು ನೀಡಿಲ್ಲ. ಆದರೆ ಮೈಸೂರಿನ ಉದಯಗಿರಿ ಘಟನೆಯನ್ನು ವಿವಾದ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ರಾಜಕೀಯ ಕಾರಣಕ್ಕೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಬಳಿ ಗುಂಪು ಗಲಭೆ ಪ್ರಕರಣ ಕುರಿತು ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಪ್ರಕರಣದಲ್ಲಿ ತಪ್ಪು ಮಾಡಿದವರ ವಿರುದ್ಧ ನಮ್ಮ ಸರಕಾರ ಈಗಾಗಲೇ ಕ್ರಮ ಕೈಗೊಂಡಿದೆ ಎಂದರು.
ರಾಜ್ಯ ಸರಕಾರ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಬಿಜೆಪಿಯ ಆರೋಪ ಅರ್ಥಹೀನವಾಗಿದ್ದು, ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ಮುಟ್ಟುತ್ತಿವೆ. ಎಸ್ಸಿ, ಎಸ್ಟಿ, ಓಬಿಸಿ ಸಮುದಾಯಕ್ಕೂ ತಲುಪುತ್ತಿದೆ. ಅವರ ಅಭಿವೃದ್ಧಿಗೆ ಆ ಹಣ ಬಳಸುವುದು ತಪ್ಪಲ್ಲ ಎಂದು ಸಚಿವರು ಹೇಳಿದರು.
ಕೋವಿಡ್ ಹಗರಣದ ವಿಚಾರವಾಗಿ ನ್ಯಾಯಮೂರ್ತಿ ಜಸ್ಟೀಸ್ ಮೈಕಲ್ ಕುನ್ಹಾ ಸಮಿತಿ ವರದಿ ನೀಡಿತ್ತು. ಅದರಂತೆ ಕೆಲವು ಕಂಪೆನಿಗಳಿಗೆ ನೋಟಿಸ್ ನೀಡಲಾಗಿತ್ತು. ಕೋವಿಡ್ ಹಗರಣದ ಕುರಿತಂತೆ ಏಕಾಏಕಿ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ತಪ್ಪಿತಸ್ಥರು ಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತರುವ ಕಾರಣದಿಂದ ಸರಕಾರ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ವ್ಯವಹಾರಗಳು ಸಂಶಯಾಸ್ಪದವಾಗಿವೆ. ಎಲ್ಲವನ್ನೂ ಪರಿಶೀಲನೆ ನಡೆಸುತ್ತಿದ್ದೇವೆ.
-ದಿನೇಶ್ ಗುಂಡೂರಾವ್, ಆರೋಗ್ಯ ಇಲಾಖೆ ಸಚಿವ