ಕೆಪಿಸಿಸಿಯಲ್ಲಿ ಯಾವುದೇ ಹುದ್ದೆ ಖಾಲಿ ಇಲ್ಲ: ಡಿ.ಕೆ.ಸುರೇಶ್
ಡಿ.ಕೆ.ಸುರೇಶ್
ಬೆಂಗಳೂರು : ಸದ್ಯಕ್ಕೆ ಕೆಪಿಸಿಸಿಯಲ್ಲಿ ಯಾವುದೇ ಹುದ್ದೆ ಖಾಲಿ ಇಲ್ಲ. ಅಧ್ಯಕ್ಷ ಸ್ಥಾನಕ್ಕೆ ಆಸೆ, ದುರಾಸೆ ನನ್ನಲ್ಲಿಲ್ಲ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಿಮ್ಮ ಹೆಸರು ಕೇಳಿಬರುತ್ತಿದೆ ಎಂದು ಸೋಮವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಸದ್ಯ ವಿಶ್ರಾಂತಿಯಲ್ಲಿದ್ದೇನೆ. ಯಾವುದೇ ಸ್ಥಾನ ಸಿಗಬೇಕು ಅಂತಾದರೆ ಸಿಕ್ಕೇ ಸಿಗುತ್ತದೆ. ಇಲ್ಲದಿದ್ದರೆ ಸಿಗುವುದಿಲ್ಲ. ಯಾವುದೂ ಇಲ್ಲಿ ಸ್ವಂತ ಸ್ವತ್ತಲ್ಲ. ಸಾರ್ವಜನಿಕವಾದ ಹುದ್ದೆಗಳಿವು ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ ಎಂದು ಕೆ.ಎನ್.ರಾಜಣ್ಣ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ವಪಕ್ಷಗಳ ಹಿರಿಯ ನಾಯಕರಾದ ರಾಜಣ್ಣ ಹೆಚ್ಚು ಶಕ್ತಿ ಇರುವವರು. ಅವರ ನೇತೃತ್ವದಲ್ಲಿ ಪಕ್ಷ ಇನ್ನಷ್ಟು ಉತ್ತಮವಾಗಿ ಸಂಘಟನೆಯಾಗುತ್ತದೆ ಎನ್ನುವ ವಿಶ್ವಾಸ ಅವರಿಗಿದೆ ಎಂದು ತಿಳಿಸಿದರು.
ರಾಜಣ್ಣ ಜನತಾದಳ, ಬಿಜೆಪಿಯವರ ಜೊತೆ ಒಳ್ಳೆ ಸಖ್ಯವನ್ನಿಟ್ಟುಕೊಂಡಿದ್ದಾರೆ. ಅಲ್ಲಿಂದ ಒಂದಷ್ಟು ಜನರನ್ನು ಕರೆದುಕೊಂಡು ಬರಬಹುದು ಎನಿಸುತ್ತದೆ. ಹೀಗಾಗಿ ಅವರು ಪಕ್ಷದ ನೇತೃತ್ವವಹಿಸಲು ತುಡಿತದಲ್ಲಿದ್ದಾರೆ. ಅವರಿಗೆ ಹೈಕಮಾಂಡ್ ಜವಾಬ್ದಾರಿ ವಹಿಸಿದರೆ ನಾವು ಸಹಕಾರ ನೀಡಲು ಸಿದ್ಧ ಎಂದು ಸುರೇಶ್ ತಿಳಿಸಿದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ರಾಮನಗರದ ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸುರೇಶ್, ಅವರು ಉತ್ತಮವಾದ ಆಶಾಭಾವನೆ ಇಟ್ಟುಕೊಂಡಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಶಾಸಕರು ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಕುಮಾರಸ್ವಾಮಿ ಹೇಳಿಕೆಯನ್ನು ಸವಾಲು ಹಾಗೂ ಪ್ರತಿμÉ್ಟಯಾಗಿ ಸ್ವೀಕರಿಸಿ, ನಾಲ್ಕು ಶಾಸಕರು ಜಿಲ್ಲೆಯ ಜನರ ಋಣ ತೀರಿಸುವಂತೆ ಕೆಲಸ ಮಾಡಬೇಕು ಎಂದು ಮನವಿ ಮಾಡುತ್ತೇವೆ ಎಂದು ತಿಳಿಸಿದರು.
ಚನ್ನಪಟ್ಟಣದಲ್ಲಿ ಡಿ.14ರಂದು ಕೃತಜ್ಞತಾ ಸಮಾರಂಭವನ್ನು ಇಟ್ಟುಕೊಂಡಿದ್ದೇವೆ. ಸಿಎಂ ಹಾಗೂ ಡಿಸಿಎಂ ಕೂಡ ಈ ದಿನಾಂಕ ಕೊಟ್ಟಿದ್ದಾರೆ. ಆದರೆ ಕೆಲವು ಶಾಸಕರು ಅಧಿವೇಶನ ಮುಕ್ತಾಯದ ಬಳಿಕ ಮಾಡಿ ಎಂದು ಕೇಳುತ್ತಿದ್ದು, ಅಧಿವೇಶನದ ಬಳಿಕ ರವಿವಾರದಂದು ಈ ಸಮಾರಂಭ ಮಾಡುತ್ತೇವೆ ಎಂದು ಸುರೇಶ್ ತಿಳಿಸಿದರು.
ಕುಮಾರಸ್ವಾಮಿ ಮಾಡುತ್ತಿರುವುದು ಅದೇ ಅಲ್ಲವೇ?:
ಕಾಂಗ್ರೆಸ್ ಸರಕಾರ ಬೀಳಿಸಲು ನಾವು ಬಿಜೆಪಿಗೆ ಸಹಕಾರ ನೀಡಬೇಕು ಎಂದು ಕುಮಾರಸ್ವಾಮಿ ತಮ್ಮ ಕಾರ್ಯಕರ್ತರಿಗೆ ಕರೆ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ಕುಮಾರಸ್ವಾಮಿ ಮಾಡುತ್ತಿರುವುದು ಅದೇ ಅಲ್ಲವೇ? ಅವರು ಬಿಜೆಪಿ ಜೊತೆಯಲ್ಲಿದ್ದಾರೆ ಎಂದು ರಾಜ್ಯ ಹಾಗೂ ರಾಷ್ಟ್ರದ ಜನರಿಗೆ ಗೊತ್ತಿದೆ. ಎನ್ಡಿಎ ಭಾಗವಾಗಿ ಕೇಂದ್ರದ ಮಂತ್ರಿಯಾಗಿದ್ದಾರೆ. ಅವರ ಪತನದ ಅಜೆಂಡಾಗೆ ರಾಜ್ಯದ ಜನ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಉತ್ತರ ನೀಡಿದ್ದಾರೆ ಎಂದು ತಿರುಗೇಟು ನೀಡಿದರು.
ಸ್ವಾಮೀಜಿ ವಿರುದ್ಧದ ಪ್ರಕರಣ ಮುಕ್ತಾಯಗೊಳಿಸಲು ಮನವಿ: ಚಂದ್ರಶೇಖರ ಸ್ವಾಮೀಜಿ ಮೇಲೆ ದ್ವೇಷದ ರಾಜಕಾರಣ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಇಂತಹ ಹೇಳಿಕೆ ಬಂದಾಗ ಸರಕಾರ ದೂರು ದಾಖಲಿಸಿಕೊಳ್ಳುವುದು ಸಹಜ. ಈಗಾಗಲೇ ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಇಲ್ಲಿಗೆ ಮುಕ್ತಾಯಗೊಳಿಸುವಂತೆ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗೆ ಮನವಿ ಮಾಡುತ್ತೇನೆ ಎಂದು ಸುರೇಶ್ ತಿಳಿಸಿದರು.