ಆರ್ಥಿಕ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿಗೂ ವ್ಯತ್ಯಾಸವಿಲ್ಲ: ನೂರ್ ಶ್ರೀಧರ್

ಬೆಂಗಳೂರು: ಕೇಂದ್ರ ಸರಕಾರದ ಬಜೆಟ್ ಸಂಪೂರ್ಣವಾಗಿ ಜನ ವಿರೋಧಿಯಾಗಿದೆ. ಅಲ್ಲದೆ, ಬಂಡವಾಳಶಾಹಿಗಳ ಪರವಾಗಿದ್ದು, ರಾಜ್ಯದ ಹಕ್ಕುಗಳನ್ನು ಹರಣ ಮಾಡುವಂತಹದ್ದಾಗಿದೆ ಎಂದು ಕರ್ನಾಟಕ ಜನಶಕ್ತಿಯ ನೂರ್ ಶ್ರೀಧರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ಜನಚಳವಳಿಗಳ ಬಜೆಟ್ ಅಧಿವೇಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸರಕಾರ ಬದಲಾಗಿದ್ದರೂ ನೀತಿಗಳು ಬದಲಾಗಿಲ್ಲ. ಹಳೆಯ ನೀತಿಗಳನ್ನು ತಿರಸ್ಕರಿಸದೆಯೇ ಹೊಸಹಾದಿ ತುಳಿಯುತ್ತೇವೆಂದು ಸಿಎಂ ಹೇಳಿದರೆ, ನಂಬಲು ಸಾಧ್ಯವಿಲ್ಲ. ಬಿಜೆಪಿ ತಂದಿದ್ದ 8 ಕಾಯ್ದೆಗಳನ್ನೂ ಮುಂದುವರೆಸುವ ಮೂಲಕ ಕಾಂಗ್ರೆಸ್ ನೀತಿಗೂ ಬಿಜೆಪಿ ನೀತಿಗೂ ಆರ್ಥಿಕ ವಿಚಾರದಲ್ಲಿ ಬದಲಾವಣೆ ಇಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸಿಕೊಂಡಿದೆ ಎಂದು ಹೇಳಿದರು.
ಕೇಂದ್ರ ಸರಕಾರ ಕೃಷಿಯನ್ನು ಸಂಪೂರ್ಣವಾಗಿ ಖಾಸಗಿ ಕಾರ್ಪೊರೇಟುಗಳಿಗೆ ಒಪ್ಪಿಸಲು ಹಾತೊರೆಯುತ್ತಿದೆ. ಅಲ್ಲದೇ ಕಾರ್ಮಿಕ ವರ್ಗದ ಹಕ್ಕುಗಳನ್ನು ಕಸಿದು ಗುಲಾಮಿ ಕಾರ್ಮಿಕರನ್ನು ಸೃಷ್ಟಿಸಲು ಬಯಸುತ್ತಿದೆ. ಜಿಎಸ್‍ಟಿ ಎಂಬುದು ಜನಸಾಮಾನ್ಯರನ್ನು ಸುಲಿಯುವ ಹಾಗೂ ರಾಜ್ಯದ ಸಂಪನ್ಮೂಲಗಳನ್ನೆಲ್ಲಾ ಸೂರೆಗೈದು ಅವನ್ನು ದೈನೇಸಿಯಾಗಿಸಿ ಬೇಡುವ ಸ್ಥಿತಿಗೆ ತಳ್ಳುವ ಲೂಟಿಕೋರ ಪದ್ದತಿಯಾಗಿದೆ. ಸೆಸ್ ಹಣವನ್ನೆಲ್ಲಾ ಕೇಂದ್ರವೇ ಕಬಳಿಸಿ ರಾಜ್ಯಗಳಿಗೆ ದ್ರೋಹಬಗೆಯಲಾಗುತ್ತಿದೆ ಎಂದು ನೂರ್ ಶ್ರೀಧರ್ ತಿಳಿಸಿದರು.
ರೈತ ಸಂಘಟನೆಯ ಬಡಗಲಪುರ ನಾಗೇಂದ್ರ ಮಾತನಾಡಿ, ಕೇಂದ್ರ ಬಜೆಟ್ ಮತ್ತು ನೀತಿಗಳು ಖಾಸಗೀಕರಣವನ್ನು ವೇಗಗೊಳಿಸುವ ಮತ್ತು ಕಲ್ಯಾಣ ಕ್ರಮಗಳಿಗೆ ಕತ್ತರಿ ಹಾಕುವ ಗುರಿಯನ್ನು ಹೊಂದಿವೆ. ಇವು ಶೋಷಿತ ಸಮುದಾಯಗಳ ಸಬಲೀಕರಣಕ್ಕೆ ಇದ್ದ ಎಲ್ಲ ಮಾರ್ಗಗಳನ್ನು ಮುಚ್ಚಿಹಾಕಿ, ಮೀಸಲಾತಿಯನ್ನು ಅಘೋಷಿತವಾಗಿ ರದ್ದುಮಾಡಿ, ಅವರನ್ನು ಮತ್ತೆ ಕತ್ತಲಕೂಪಕ್ಕೆ ತಳ್ಳುವ ಇರಾದೆಯನ್ನು ಹೊಂದಿವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಸಂಪೂರ್ಣವಾಗಿ ಮರೆತಿದೆ. ಐದು ಗ್ಯಾರಂಟಿಗಳ ಗುಂಗಿನಲ್ಲೇ ಸರಕಾರ ತೇಲುತ್ತಿದೆ. ಜನ ವರ್ಗಗಗಳಿಗೆ ಕೊಟ್ಟಿದ್ದ ಭರವಸೆಗಳಲ್ಲಿ ಒಂದೇ ಒಂದು ಭರವಸೆಯನ್ನೂ ಈಡೇರಿಸದೆ, ಈಡೇರಿಸುವ ಸೂಚನೆಯನ್ನೂ ನೀಡದೇ ದ್ರೋಹ ಬಗೆದಿದೆ. ಯಾವುದೇ ಸ್ಪಷ್ಟ ನೀತಿ ಮತ್ತು ದಿಕ್ಕು ಇಲ್ಲದ, ಜನಪರ ಅಭಿವೃದ್ದಿಯ ರೋಡ್ ಮ್ಯಾಪ್ ಇಲ್ಲದ ಬಜೆಟ್ ಇದಾಗಿದೆ. ಅಷ್ಟು ಮಾತ್ರವಲ್ಲ ಇದು ಬೆಂಗಳೂರು ಮತ್ತು ಕಾರ್ಪೊರೇಟ್ ಕೇಂದ್ರಿತ ಬಜೆಟ್ ಆಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಬಿಕ್ಕಟ್ಟನ್ನು ಬಗೆಹರಿಸಲಿಕ್ಕಾಗಲೀ, ರೈತರನ್ನು ಋಣಮುಕ್ತ ರನ್ನಾಗಿಸುವುದಕ್ಕಾಗಲೀ, ರೈತರ ಬೆಳೆಗೆ ನ್ಯಾಯಸಮ್ಮತ ಬೆಲೆ ದಕ್ಕಿಸಿಕೊಡಲಿಕ್ಕಾಗಲೀ, ಕಾರ್ಮಿಕರಿಗೆ ಘನತೆಯ ವೇತನ ಖಾತ್ರಿ ಪಡಿಸಲಿಕ್ಕಾಗಲೀ, ಉದ್ಯೋಗ ಸೃಷ್ಟಿಸಲಿಕ್ಕಾಗಲೀ, ಕನಿಷ್ಟ ವೇತನ ಖಾತ್ರಿಪಡಿಸಲಿಕ್ಕಾಗಲೀ, ತಳ ಸಮುದಾಯಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಾಗಲೀ, ಬಡವರಿಗೆ ಭೂಮಿ ಮತ್ತು ವಸತಿ ಒದಗಿಸಲಿಕ್ಕಾಗಲೀ ಯಾವುದೇ ನಿರ್ಧಿಷ್ಟ ಕ್ರಮಗಳಿಲ್ಲ. ಯೋಜನೆ ಕಾರ್ಮಿಕರಿಗೆ ಒಂದು ಸಾವಿರ ರೂ.ಗಳನ್ನು ಹೆಚ್ಚಿಸಿ ಕೈ ತೊಳೆದುಕೊಂಡಿದೆ ಎಂದು ಬಡಗಲಪುರ ನಾಗೇಂದ್ರ ಬೇಸರ ವ್ಯಕ್ತಪಡಿಸಿದರು.