ಆಹಾರ ಮತ್ತು ನೀರಿನ ಸುಸ್ಥಿರ ಭದ್ರತೆಯ ಥೀಮ್‍ನಲ್ಲಿ ನ್ಯಾನೋ ಸಮ್ಮೇಳನ : ಎನ್.ಎಸ್. ಭೋಸರಾಜು
ಬೆಂಗಳೂರು: ಪ್ರತಿಷ್ಠಿತ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನದ 14ನೇ ಆವೃತ್ತಿಯು ಆಹಾರ ಮತ್ತು ನೀರಿನ ಸುಸ್ಥಿರ ಭದ್ರತೆಗೆ ನ್ಯಾನೋ ಕೊಡುಗೆಯ ಕೋರ್ ಥೀಮ್ ಮೇಲೆ ಆಯೋಜಿಸಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ತಿಳಿಸಿದರು.
ಶನಿವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನದ 13ನೇ ಆವೃತ್ತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕವನ್ನು ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದ ಜಾಗತಿಕ ಕೇಂದ್ರವನ್ನಾಗಿ ಅಭಿವೃದ್ದಿಪಡಿಸುವ ಉದ್ದೇಶದಿಂದ ಬೆಂಗಳೂರು ನ್ಯಾನೋ ಇಂಡಿಯಾ ಸಮಾವೇಶದ ರೀತಿಯಲ್ಲಿಯೇ ಬೆಂಗಳೂರು ಇಂಡಿಯಾ ಕ್ವಾಂಟಮ್ ಸಮ್ಮೇಳನವನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಪ್ರೊ.ಸಿ.ಎನ್.ಆರ್.ರಾವ್ ಮಾರ್ಗದರ್ಶನದಲ್ಲಿ ಆರಂಭಿಸಲಾದ ಪ್ರತಿಷ್ಠಿತ ನ್ಯಾನೋ ಸಮ್ಮೇಳನ ಅಂತರ್‍ರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ಗಳಿಸಿದೆ. ನ್ಯಾನೋ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು, ಇರುವ ಅವಕಾಶಗಳು, ಉದ್ದಿಮೆಗಳ ಪ್ರಾರಂಭಕ್ಕೆ ಇರುವ ಅವಕಾಶಗಳ, ನ್ಯಾನೋ ಕ್ಷೇತ್ರದ ವಿಫುಲ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳು, ಸ್ಟಾರ್ಟ್‍ಅಪ್, ಕೈಗಾರಿಕೋದ್ಯಮಿಗಳಿಗೆ ಅರಿವು ಮೂಡಿಸುವಲ್ಲಿ ಇದು ಯಶಸ್ವಿಯಾಗಿದೆ. ದೇಶ ವಿದೇಶಗಳ 700 ಕ್ಕೂ ಹೆಚ್ಚು ಪರಿಣಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಸಾವಿರಾರು ಜನ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಆಹಾರ ಮತ್ತು ನೀರಿನ ಭದ್ರತೆ ಹಾಗೂ ಸುಸ್ಥಿರ ಅಭಿವೃದ್ಧಿ: 2026ರಲ್ಲಿ ನಡೆಯಲಿರುವ 14ನೇ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನವನ್ನು ಆಹಾರ ಮತ್ತು ನೀರಿನ ಭದ್ರತೆಯ ಥೀಮ್ ಅಡಿಯಲ್ಲಿ ಅಯೋಜಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಜಗತ್ತನ್ನು ಇನ್ನಷ್ಟು ಸುಸ್ಥಿರಗೊಳಿಸುವ ನಿಟ್ಟಿನಲ್ಲಿ ನ್ಯಾನೋ ತಂತ್ರಜ್ಞಾನ ಪ್ರಮುಖ ಪಾತ್ರವಹಿಸಲಿದೆ ಎಂದು ಭೋಸರಾಜು ಅಭಿಪ್ರಾಯಪಟ್ಟರು.
ಹವಾಮಾನ, ಶಕ್ತಿ ಹಾಗೂ ಆರೋಗ್ಯ ಕ್ಷೇತ್ರಗಳ ಜೊತೆಯಲ್ಲೇ, ಜಾಗತಿಕವಾಗಿ ಆಹಾರ ಮತ್ತು ನೀರಿನ ಭದ್ರತೆ ಪ್ರಮುಖ ಸವಾಲುಗಳಾಗಿವೆ. ಇವುಗಳ ಸಮರ್ಪಕ ನಿರ್ವಹಣೆಯಲ್ಲಿ ಸುಸ್ಥಿರ ಕ್ರಮಗಳನ್ನ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನ್ಯಾನೋ ತಂತ್ರಜ್ಞಾನದ ಬಳಕೆಯ ಬಗ್ಗೆ ಮುಂದಿನ ಸಮಾವೇಶದಲ್ಲಿ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಅವರು ತಿಳಿಸಿದರು.
2025ರಲ್ಲಿ ಬೆಂಗಳೂರು ಇಂಡಿಯಾ ಕ್ವಾಂಟಮ್ ಸಮ್ಮೇಳನ ಆಯೋಜನೆ: ಕ್ವಾಂಟಮ್ ತಂತ್ರಜ್ಞಾನದಲ್ಲಿನ ಹೊಸ ಆವಿಷ್ಕಾರಗಳು ನಮ್ಮ ದೈನಂದಿನ ಜೀವನದಲ್ಲಿ ಗಮನಾರ್ಹ ಸುಧಾರಣೆಗಳನ್ನು ತಂದಿವೆ. ಕ್ವಾಂಟಮ್ ತಂತ್ರಜ್ಞಾನವು ಅನೇಕ ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆ ತರುವ ಸಾಮಥ್ರ್ಯವನ್ನು ಹೊಂದಿದೆ. ಕ್ವಾಂಟಮ್ ತಂತ್ರಜ್ಞಾನವು, ತಂತ್ರಜ್ಞಾನದಲ್ಲಿ ಸಾಧ್ಯವಿರುವ ಹೊಸ ಸಾಧ್ಯತೆಗಳನ್ನ ತಲುಪಲು ಸಹಾಯಕವಾಗಲಿದೆ, ಹೊಸ ಆವಿಷ್ಕಾರ ಹಾಗೂ ಅಭಿವೃದ್ದಿಗೂ ಕಾರಣವಾಗಲಿದೆ ಎಂದು ಅವರು ಹೇಳಿದರು.
ಈ ಪ್ರಮುಖ ಕ್ಷೇತ್ರದಲ್ಲಿ ನಮ್ಮ ನಾವೀನ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರಕಾರವು ಈಗಾಗಲೇ ಐಐಎಸ್ಸಿ ಬೆಂಗಳೂರಿನಲ್ಲಿ ಸ್ಥಾಪಿಸಲಾಗಿರುವ ಕ್ವಾಂಟಮ್ ರಿಸರ್ಚ್ ಪಾರ್ಕ್ ಗೆ ಅಗತ್ಯ ಬೆಂಬಲ ನೀಡುತ್ತಿದೆ. ಕ್ವಾಂಟಮ್ ತಂತ್ರಜ್ಞಾನದ ಮೂಲಕ ಪ್ರಸ್ತುತ ಪಡಿಸಲಾಗಿರುವ ಅಗಾಧ ಅವಕಾಶಗಳನ್ನ ಉತ್ತಮವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದು ಭೋಸರಾಜು ತಿಳಿಸಿದರು.
ನಮ್ಮ ಜೀವನವನ್ನು ಸುಧಾರಿಸಲು, ಕೈಗಾರಿಕೆಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಕ್ವಾಂಟಮ್ ತಂತ್ರಜ್ಞಾನದ ಸಾಮಥ್ರ್ಯವನ್ನು ಆವಿಷ್ಕರಿಸಲು, ಅಂತಿಮವಾಗಿ ಸಮಾಜಕ್ಕೆ ಅದರ ಪ್ರಯೋಜನವನ್ನು ನೀಡಲು ನಾವು ಬೆಂಗಳೂರು ಇಂಡಿಯಾ ನ್ಯಾನೋ ಸಮಾವೇಶದಂತೆಯೇ, ಬೆಂಗಳೂರು ಇಂಡಿಯಾ ಕ್ವಾಂಟಮ್ ಸಮಿಟ್ ಆಯೋಜಿಸಲು ನಿರ್ಧರಿಸಿದ್ದೇವೆ ಎಂದು ಮಾಹಿತಿ ನೀಡಿದರು.