ಲಂಚ ಪಡೆದು ವಂಚಿಸಿದ ಅಧಿಕಾರಿ ಅಮಾನತು: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್
ಬೆಂಗಳೂರು: ಜಮೀನಿಗೆ ‘ಎ’ ಖಾತೆ ಮಾಡಿಕೊಡಲು 1ಲಕ್ಷ ರೂಪಾಯಿ ಲಂಚ ಪಡೆದು ವಂಚಿಸಿದ ಬಿಬಿಎಂಪಿ ಅಧಿಕಾರಿಯನ್ನು ಅಮಾನತು ಮಾಡಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಬುಧವಾರ ಕೆ.ಆರ್. ಪುರದಲ್ಲಿ ಬುಧವಾರ ‘ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಜನರ ಸಮಸ್ಯೆ ಆಲಿಸಿ ಮಾತನಾಡಿದ ಅವರು, ನ್ಯಾಯಬೆಲೆ ಅಂಗಡಿಯವರು ಪಡಿತರ ಚೀಟಿ ಮಾಡಿಕೊಡಲು 7 ಸಾವಿರ ಲಂಚ ಪಡೆದಿದ್ದಾರೆ ಎಂದು ದೂರು ಬಂದಿದೆ. ಹೀಗಾಗಿ ಲಂಚಪಡೆಯುವ ನ್ಯಾಯಬೆಲೆ ಅಂಗಡಿ ಲೈಸೆನ್ಸ್ ರದ್ದು ಮಾಡಬೇಕು ಎಂದರು.
ವಿಜಿನಾಪುರದ ವಾಜಿದ್-ಮಸ್ಕಾನ್ ದಂಪತಿಯ ಮಗ ಮುಜಾಹಿಲ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಹಾಗಾಗಿ ಅವರ ಚಿಕಿತ್ಸೆಗೆ ಪಾಲಿಕೆ ಆಯುಕ್ತರ ಕಚೇರಿಯಿಂದ 1 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಅವರು ಹೇಳಿದರು.
ನಾರಾಯಣಪುರ ನಿವಾಸಿ ಸೆಲ್ವಮಣಿ ಎಂಬುವವರ ಪತಿ ರಾಜ ಅವರ ಎರಡೂ ಮೂತ್ರಪಿಂಡ ವೈಫಲ್ಯ ಹಿನ್ನೆಲೆಯಲ್ಲಿ, ಅವರಿಗೆ ಡಯಾಲಿಸಿಸ್ ಚಿಕಿತ್ಸೆ ನೀಡಬೇಕಿದೆ. ಹೀಗಾಗಿ ಪಾಲಿಕೆ ಆಯುಕ್ತರ ಕಚೇರಿಯಿಂದ 1 ಲಕ್ಷ ರೂ.ಆರ್ಥಿಕ ಸಹಾಯ ಮಾಡಲು ಸೂಚನೆ ನೀಡಿದರು.