ಕಾಂಗ್ರೆಸ್ನೊಂದಿಗಿನ ನಮ್ಮ ಸರಕಾರ ರಚನೆ ಮಾನಸಿಕ ಹಿಂಸೆ ನೀಡಿತ್ತು: ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ನಾನು ಜನರನ್ನು ಲೂಟಿ ಮಾಡಿಲ್ಲ, ಜನರನ್ನೇ ಪೂಜೆ ಮಾಡುತ್ತೇನೆ. ಹೀಗಾಗಿ, ನಾನು ಕಾಂಗ್ರೆಸ್ ನೋಡಿ ಕಲಿಯುವುದು ಏನು ಇಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಚನ್ನಪಟ್ಟಣದಲ್ಲಿ ನಡೆದ ಎನ್ಡಿಎ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ ಅವರು, ರೈತರ ಸಾಲಮನ್ನಾ ಮಾಡಿದ ನೆಮ್ಮದಿ ಬಿಟ್ಟರೆ, ಕಾಂಗ್ರೆಸ್ನೊಂದಿಗಿನ ನಮ್ಮ ಸರಕಾರ ರಚನೆ ಮಾನಸಿಕ ಹಿಂಸೆ ನೀಡಿತು ಎಂದರು.
ಬಿಜೆಪಿ ಜೆಡಿಎಸ್ ಮೈತ್ರಿ ಹಾಲು ಜೇನಿನಂತೆ ಬೆರೆತು ಹೋಗಿದ್ದು, ಅದನ್ನು ಸಹಿಸಲು ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ನಾಡಿನ ಜನರ ಬದುಕನ್ನು ಸರಿಪಡಿಸುವ ನಿಟ್ಟಿನಲ್ಲಿ ಎನ್ಡಿಎ ಮೈತ್ರಿಕೂಟ ಪ್ರಾಣಿಕವಾಗಿ ಕೆಲಸ ಮಾಡಲಿದೆ ಎಂದು ಅವರು ಹೇಳಿದರು.
ನಿಖಿಲ್ ಕುಮಾರಸ್ವಾಮಿ ಅವರನ್ನು ಕಟ್ಟಿ ಹಾಕಲು ಇಡೀ ಸರಕಾರ ಷಡ್ಯಂತ್ರ ರೂಪಿಸಿದೆ. ಆದರೆ, ದುರಾಲೋಚನೆ, ಕೆಟ್ಟ ಪ್ರತಿಫಲಕಾರಿ ಆಗುವುದಿಲ್ಲ ಎಂಬುದನ್ನು ಎಂದ ಅವರು, ಜೆಡಿಎಸ್ ಪಕ್ಷವನ್ನು ಸರ್ವನಾಶ ಮಾಡಲು ಕಾಂಗ್ರೆಸ್ ಸಂಚು ರೂಪಿಸುತ್ತಲೇ ಇದೆ. ಅವರ ಕನಸು ಎಂದಿಗೂ ಈಡೇರುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ವಿ.ಸೋಮಣ್ಣ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಪ್ರಮುಖರಿದ್ದರು.