ಖಲೀಲ್ ಮಾಮೂನ್ ಜ್ಞಾನಪೀಠ ಪ್ರಶಸ್ತಿಗೆ ಅರ್ಹರಾಗಿದ್ದ ಕವಿ: ಚಿರಂಜೀವಿ ಸಿಂಗ್
ಬೆಂಗಳೂರು: ದೇಶದ ಸಾಹಿತ್ಯ ಲೋಕಕ್ಕೆ ಸಲ್ಲಿಸುವ ಅಪಾರ ಕೊಡುಗೆಯನ್ನು ಗೌರವಿಸಿ ಕೊಡುವಂತಹ ಜ್ಞಾನಪೀಠ ಪ್ರಶಸ್ತಿಗೆ ಉರ್ದು ಅಕಾಡೆಮಿಯ ಮಾಜಿ ಅಧ್ಯಕ್ಷ ಖಲೀಲ್ ಮಾಮೂನ್ ಅರ್ಹರಾಗಿದ್ದರು ಎಂದು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಬಣ್ಣಿಸಿದರು.
ಸೋಮವಾರ ನಗರದ ಶೇಷಾದ್ರಿಪುರದಲ್ಲಿರುವ ಕೆಎಂಡಿಸಿ ಭವನದಲ್ಲಿನ ಸಭಾಂಗಣದಲ್ಲಿ ರಾಜ್ಯ ಉರ್ದು ಅಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ ಉರ್ದು ಕವಿ, ಬರಹಗಾರ ಹಾಗೂ ಅನುವಾದಕ ‘ಖಲೀಲ್ ಮಾಮೂನ್‍ರವರಿಗೆ ನುಡಿ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಸಾಹಿತಿ ಗುಲ್ಝಾರ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಲಾಗಿದೆ. ಅದಕ್ಕೂ ಮುನ್ನ ಖಲೀಲ್ ಮಾಮೂನ್ ಅವರನ್ನು ಗುರುತಿಸಿ ಪ್ರಶಸ್ತಿ ನೀಡಬೇಕಿತ್ತು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಖಲೀಲ್ ಮಾಮೂನ್ ಕೇವಲ ನಮ್ಮ ರಾಜ್ಯಕ್ಕೆ ಸೀಮಿತವಾದ ವ್ಯಕ್ತಿಯಾಗಿರಲಿಲ್ಲ. ತಮ್ಮ ಸಾಹಿತ್ಯದ ಮೂಲಕ ಇಡೀ ವಿಶ್ವದಲ್ಲಿ ಎಲ್ಲೆಲ್ಲಿ ಉರ್ದು ಬಳಕೆಯಲ್ಲಿದೆಯೋ ಅಲ್ಲಿ ಚಿರಪರಿಚಿತರಾಗಿದ್ದರು ಎಂದು ಚಿರಂಜೀವಿ ಸಿಂಗ್ ಹೇಳಿದರು.
ಉರ್ದು ಸಾಹಿತ್ಯ ಲೋಕಕ್ಕೆ ಅವರು ನೀಡಿರುವ ಕೊಡುಗೆ ಅಪಾರವಾದದ್ದು. ಆದರೆ, ಯಾವತ್ತೂ ಪ್ರಚಾರದ ಹಂಗಿಗೆ ಬೀಳಲಿಲ್ಲ. ಪ್ರಶಸ್ತಿಗಳಿಗೆ ಸನ್ಮಾನಗಳಿಗೆ ಹಾತೋರಯಲಿಲ್ಲ. ಖಲೀಲ್ ಮಾಮೂನ್ ಅವರು ಎಂಟು ಪುಸ್ತಕಗಳನ್ನು ಬರೆದಿದ್ದಾರೆ. ಉರ್ದು ಅಕಾಡೆಮಿಯೂ ಆ ಎಲ್ಲ ಪುಸ್ತಕಗಳನ್ನು ಒಟ್ಟುಗೂಡಿಸಿ ಸಮಗ್ರ ಸಾಹಿತ್ಯ ಸಂಪುಟವನ್ನು ಹೊರತರಬೇಕು ಎಂದು ಅವರು ಸಲಹೆ ನೀಡಿದರು.
ರಾಜ್ಯ ಉರ್ದು ಅಕಾಡೆಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವರಿಗೆ ತುಂಬಾ ಕಡಿಮೆ ಸಮಯ ಸಿಕ್ಕಿತ್ತು. ಆದರೂ, ಆ ಅವಧಿಯಲ್ಲಿ ಅವರು ಮಾಡಿರುವ ಕೆಲಸ ಸ್ಮರಣೀಯವಾದದ್ದು. ಉರ್ದು ಅಕಾಡೆಮಿಗೆ ಚಲನಶೀಲತೆಯನ್ನು ತಂದುಕೊಟ್ಟ ಹೆಗ್ಗಳಿಕೆ ಖಲೀಲ್ ಮಾಮೂನ್ ಅವರಿಗೆ ಸಲ್ಲುತ್ತದೆ ಎಂದರೆ ಅತಿಶಯೋಕ್ತಿಯಲ್ಲ ಎಂದು ಚಿರಂಜೀವಿ ಸಿಂಗ್ ಅಭಿಪ್ರಾಯಪಟ್ಟರು.
ಖಲೀಲ್ ಮಾಮೂನ್ ಅವರಂತೆ ಕವಿತೆಗಳನ್ನು ರಚಿಸುವಂತಹ ಕವಿಯನ್ನು ಈಗಿನ ಕಾಲಘಟ್ಟದಲ್ಲಿ ನಾವು ಕಾಣಲು ಸಾಧ್ಯವಿಲ್ಲ. ಅವರು ರಚಿಸಿದಂತಹ ಕವಿತೆಗಳಲ್ಲಿ ಮೌಲ್ಯಗಳು ಇರುತ್ತಿದ್ದವು. ಅರ್ಥಗರ್ಭೀತವಾದ ಅವರ ಕವಿತೆಗಳು ಸಾಹಿತ್ಯಾಸಕ್ತರನ್ನು ಸೆಳೆಯುತ್ತಿದ್ದವು ಎಂದು ಚಿರಂಜೀವಿ ಸಿಂಗ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಸಂಚಾಲಕ ಮುಹಮ್ಮದ್ ಆಝಮ್ ಶಾಹೀದ್ ನಿರೂಪಣೆ ಮಾಡಿದರು. ಈ ಮಧ್ಯೆ ಖಲೀಲ್ ಮಾಮೂನ್ ಅವರ ಜೀವನ, ಸಾಧನೆ, ಸಾಹಿತ್ಯದ ಕುರಿತು ಬೆಳಕು ಅವರು ಚೆಲ್ಲಿದರು. ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹ್ಮದ್, ಸಾಹಿತಿ ಡಾ.ಎಚ್.ಎಸ್.ಶಿವಪ್ರಕಾಶ್, ರಾಜ್ಯ ಉರ್ದು ಅಕಾಡೆಮಿಯ ಅಧ್ಯಕ್ಷ ಮೌಲಾನ ಮುಹಮ್ಮದ್ ಅಲಿ ಖಾಝಿ, ಸದಸ್ಯರಾದ ಶಾಹಿದ್ ಖಾಝಿ, ಅನೀಸ್ ಸಿದ್ದೀಖಿ, ಝಫರ್ ಮೊಹಿಯುದ್ದೀನ್, ಡಾ.ದಾವೂದ್ ಮೊಹ್ಸಿನ್, ಅಮೀನ್ ನವಾಝ್, ಆಬಿದ್ ಅಸ್ಲಮ್, ಡಾ.ಶಾಯಿಸ್ತಾ ಯೂಸುಫ್, ಮಿಲನ್‍ಸಾರ್ ಅಥರ್ ಅಹ್ಮದ್, ಡಾ.ಮಾಹೆರ್ ಮನ್ಸೂರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.