ಸಚಿವ ಸೋಮಣ್ಣ ಮನೆಯಲ್ಲಿ ಪೂಜೆ: ಬಿಜೆಪಿ ಭಿನ್ನರ ದಂಡು

ವಿ.ಸೋಮಣ್ಣ
ಬೆಂಗಳೂರು : ಸಚಿವ ವಿ.ಸೋಮಣ್ಣ ಅವರ ದಿಲ್ಲಿಯ ಹೊಸಮನೆ ಗೃಹಪ್ರವೇಶ ಪೂಜೆಯ ನೆಪದಲ್ಲಿ ಬಿಜೆಪಿಯ ಭಿನ್ನಮತೀಯವರೆಲ್ಲ ಒಟ್ಟಿಗೆ ಸೇರಿ ರಾಜ್ಯಾಧ್ಯಕ್ಷರ ಬದಲಾವಣೆ ಸಂಬಂಧ ಸಮಾಲೋಚನೆ ನಡೆಸಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಸೋಮಣ್ಣ ಮನೆಯ ಗೃಹ ಪ್ರವೇಶಕ್ಕೆ ಬಿಜೆಪಿಯ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವರಾದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಮಾಜಿ ಶಾಸಕರಾದ ಬಿ.ಪಿ.ಹರೀಶ್, ಮಹೇಶ್ ಕುಮಟಳ್ಳಿ ಭಾಗಿಯಾಗಿದ್ದರು. ಅಲ್ಲದೆ, ಎಲ್ಲರೂ ಒಟ್ಟಿಗೆ ಸೇರಿ ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆಂದು ಹೇಳಲಾಗಿದೆ.
ಇದೇ ವೇಳೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ‘ನಾವು ಸಚಿವ ಸೋಮಣ್ಣ ಆಹ್ವಾನದ ಮೇರೆಗೆ ಬಂದಿದ್ದೇವೆ, ನಮ್ಮ ಕೆಲಸವೂ ಆಗಿದೆ’ ಎಂದು ಹೇಳಿದರು.
ಈ ಮಧ್ಯೆ ಬಿಜೆಪಿಯ ‘ತಟಸ್ಥ ಬಣ’ದಲ್ಲಿ ಗುರುತಿಸಿಕೊಂಡಿರುವ ಬಸವರಾಜ ಬೊಮ್ಮಾಯಿ, ಅರವಿಂದ್ ಬೆಲ್ಲದ್, ಮುರುಗೇಶ್ ನಿರಾಣಿ ಅವರು ಸೋಮಣ್ಣ ನಿವಾಸದಲ್ಲಿ ಪ್ರತ್ಯಕ್ಷರಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಇದೀಗ ದಿಲ್ಲಿಯಲ್ಲಿನ ಸಚಿವ ವಿ.ಸೋಮಣ್ಣ ನಿವಾಸ ಬಿಜೆಪಿ ರಾಜಕೀಯ ಚರ್ಚೆಯ ಕೇಂದ್ರವೂ ಆದಂತಾಗಿದೆ.