ಪ್ರಜ್ವಲ್ ಪ್ರಕರಣ | ಮೋದಿ, ನಡ್ಡಾ, ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರಿಂದ ಪಲಾಯನವಾದ : ರಮೇಶ್ ಬಾಬು
screengrab : x/@INCKarnataka
ಬೆಂಗಳೂರು : ಕರ್ನಾಟಕದ ಸಂಸ್ಕೃತಿ, ರಾಜಕಾರಣಕ್ಕೆ ಮಸಿ ಬಳಿಯುವಂತಹ ಲೈಂಗಿಕ ಶೋಷಣೆಯ ಘಟನೆ ನಡೆದಿದ್ದು, ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿ ಇದಾಗಿದೆ. ಹಾಲಿ ಸಂಸದ ಹಾಗೂ ಎನ್ಡಿಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮೇಲೆ ಲೈಂಗಿಕ ಶೋಷಣೆಯ ಆರೋಪ ಬಂದಿದೆ. ಕೇವಲ ಇವರ ಮೇಲೆ ಮಾತ್ರ ಆರೋಪ ಬಂದಿಲ್ಲ. ಇಡೀ ಕುಟುಂಬದ ಮೇಲೆ ಆರೋಪ ಬಂದಿದ್ದು, ಅವರ ತಂದೆಯ ಮೇಲೆಯೂ ದೂರು ದಾಖಲಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು ತಿಳಿಸಿದರು.
ಮೋದಿ, ಅಮಿತ್ ಶಾ ಅವರಿಂದ ಪಲಾಯನವಾದ
ಈ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, "ಸತ್ಯಹರಿಶ್ಚಂದ್ರನ ಮನೆಯವರಂತೆ ಬಿಜೆಪಿಯವರು ಕಳೆದ 10 ವರ್ಷಗಳಿಂದ ತಮ್ಮನ್ನು ತಾವು ಬಿಂಬಿಸಿಕೊಂಡಿದ್ದರು. ಮಾಡೋದು ಅನಾಚಾರ ಮನೆ ಮುಂದೆ ಬೃಂದಾವನ ಎನ್ನುವಂತೆ ಈ ಘಟನೆ ಬಗ್ಗೆ ಬಿಜೆಪಿಯವರು ಚಕಾರ ಎತ್ತುತ್ತಿಲ್ಲ. ಈ ದೇಶದ ಜನಕ್ಕೆ, ಮಹಿಳೆಯರಿಗೆ ಉತ್ತರ ನೀಡದೆ ತಲೆಮರೆಸಿಕೊಂಡಿದ್ದಾರೆ. ಮೋದಿ, ನಡ್ಡಾ ಅಮಿತ್ ಶಾ ಸೇರಿದಂತೆ ಇತರೇ ನಾಯಕರು ಪಲಾಯನವಾದ ಮಾಡಿದ್ದಾರೆ.
ಹೊಳೆನರಸಿಪುರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ದೇವರಾಜೇಗೌಡ ಅವರು ರಾಷ್ಟ್ರೀಯ ಹಾಗೂ ರಾಜ್ಯ ನಾಯಕರಿಗೆ ಪತ್ರವನ್ನು ಬರೆದು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಡಿ, ಮಾಡಿಕೊಂಡರು ಈ ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಡಬೇಡಿ ಏಕೆಂದರೆ ಲೈಂಗಿಕ ಹಗರಣದ ಆರೋಪ ಇವರುಗಳ ಮೇಲಿದೆ ಎಂದು ಗನಮಕ್ಕೆ ತಂದಿದ್ದರು.
ದೇವರಾಜೇಗೌಡ ಎನ್ನುವ ವ್ಯಕ್ತಿ ಕುಮಾರಸ್ವಾಮಿ ಅವರ ಜೊತೆ ಇದೇ ಲೈಂಗಿಕ ಹಗರಣದ ವಿಡಿಯೋಗಳ ಕುರಿತು ಚರ್ಚೆ ನಡೆಸಿದ್ದಾರೆ. ಈ ವಿಚಾರ ಕುಮಾರಸ್ವಾಮಿ ಅವರ ಮೂಲಕ ದೇವೇಗೌಡರ ಗಮನಕ್ಕೂ ಬಂದಿದೆ. ಬಿಜೆಪಿ ಸೇರಿದಂತೆ ಜೆಡಿಎಸ್ ಪಕ್ಷದ ಎಲ್ಲಾ ನಾಯಕರಿಗೆ ಮಾಹಿತಿ ಇದ್ದರೂ ಟಿಕೆಟ್ ನೀಡಿದ್ದು ಏಕೆ ಎಂದು ಅವರು ಪ್ರಶ್ನಿಸಿದರು.
ಇದರಿಂದಾಗಿ ಬೀದಿ, ಬೀದಿಗಳಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುವ ಪರಿಸ್ಥಿತಿ ಉದ್ಬವವಾಗಿದೆ. ಇದಕ್ಕೆ ಬಿಜೆಪಿ, ಜೆಡಿಎಸ್ ನಾಯಕರು ಏಕೆ ಉತ್ತರ ಕೊಡುತ್ತಿಲ್ಲ. ಕಳೆದ 15 ದಿನಗಳ ಹಿಂದೆ ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದರು. ಎಲ್ಲರಿಗೆ ವಿಚಾರ ಗೊತ್ತಿದ್ದರೂ ಏಕೆ ಬಹಿರಂಗ ಮಾಡಲಿಲ್ಲ. ಈಗ ಕುಮಾರಸ್ವಾಮಿ ಅವರು ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಇದು ಅವರ ಕುಟುಂಬದ ವಿಚಾರ, ಪಕ್ಷದ ನಾಯಕನ ವಿಚಾರ ಇದಕ್ಕೆ ಉತ್ತರ ನೀಡುವುದು ಸಹ ಅವರ ಜವಾಬ್ದಾರಿಯಾಗಿದೆ ಎಂದು ಅಸಮಧಾನ ಹೊರಹಾಕಿದರು.
ಆರೋಪಿಯನ್ನು ರಕ್ಷಣೆ ಮಾಡುವ ಕೆಲಸ ಮಾಡಬಾರದು
ಹೆಣ್ಣು ಮಕ್ಕಳ ಬಗ್ಗೆ ಸಾಕಷ್ಟು ಗೌರವ ಹೊಂದಿರುವ ʼಬೇಟಿ ಬಚಾವೋ, ಪಡಾವೋʼ ಎಂದು ಹೇಳುವ ಪ್ರಧಾನಿಗಳು ಈ ಪ್ರಕಣದಲ್ಲಿ ಕಿವುಡುತನ ಬಂದಿದೆ. ಎರಡು ದಿನ ಕರ್ನಾಟಕದಲ್ಲಿ ಇದ್ದರೂ ಸಹ ಏಕೆ ಮಾತನಾಡಿಲ್ಲ. ಪ್ರಧಾನಿಗಳು ಸಹ ಪ್ರಜ್ವಲ್ ಅವರನ್ನು ರಕ್ಷಣೆ ಮಾಡುವ ಇರಾದೆ ಹೊಂದಿದ್ದಾರೆಯೇ?. ಮೋದಿ ಅವರು ಯಾವುದೇ ಕಾರಣಕ್ಕೂ ಆರೋಪಿಯನ್ನು ರಕ್ಷಣೆ ಮಾಡುವ ಕೆಲಸ ಮಾಡಬಾರದು. ಈ ಹಗರಣ ಹೊರಗೆ ಬಂದ ನಂತರ ಬಿಜೆಪಿ ಮೈತ್ರಿ ಅಭ್ಯರ್ಥಿ ದೇಶ ಬಿಟ್ಟು ಹೋಗಿದ್ದಾರೆ. ಆರೋಪಿಯನ್ನು ರಕ್ಷಿಸುವುದು ಪ್ರಧಾನಿ ಹುದ್ದೆಗೆ ಘನತೆ ತರುವುದಿಲ್ಲ ಎಂದು ಹೇಳಿದರು.