ಪ್ರಜ್ವಲ್ ರೇವಣ್ಣ ಪ್ರಕರಣ | ಸಾಹಿತಿಗಳ ಅಭಿಪ್ರಾಯವನ್ನು ಸರ್ಕಾರ ಪರಿಗಣಿಸಲಿದೆ : ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣವನ್ನು ಈಗಾಗಲೇ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಾಹಿತಿಗಳು ಪತ್ರ ಬರೆದಿರುವುದರಿಂದ ಎಚ್ಚರಿಸಿದಂತಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಹೇಳಿದರು.
ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, "ಸಾಹಿತಿಗಳು ಸಮಾಜದ ಕಳಕಳಿ ಇರುವಂತವರು. ನಿತ್ಯ ಅನೇಕ ವಿಷಯಗಳನ್ನು ಅವರು ಗಮನಿಸುತ್ತಿರುತ್ತಾರೆ. ಆ ನಿಟ್ಟಿನಲ್ಲಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸಾಹಿತಿಗಳು ಪತ್ರದ ಮೂಲಕ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಸರ್ಕಾರ ತೆಗೆದುಕೊಳ್ಳುತ್ತದೆ" ಎಂದರು.
ಶಾಸಕ ಹೆಚ್.ಡಿ.ರೇವಣ್ಣ ಅವರೇ ಹಳೇ ವಿಡಿಯೋ ಎಂದು ಹೇಳಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ಇದೆಲ್ಲವೂ ಗೊತ್ತಿದ್ದು ಮುಂದುವರಿಯಲು ಬಿಟ್ಟಿರುವ ಅವರ ಕುಟುಂಬದ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಸಾಹಿತಿಗಳು ಒತ್ತಾಯಿಸಿದ್ದಾರೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಅದೆಲ್ಲದರ ವಿರುದ್ಧ ಎಸ್ಐಟಿ ಕ್ರಮ ತೆಗೆದುಕೊಳ್ಳುತ್ತದೆ. ತನಿಖೆ ಹಂತದಲ್ಲಿ ಯಾವ ವಿಚಾರಗಳನ್ನು ನಾವು ಹೇಳಲು ಬರುವುದಿಲ್ಲ. ಇದೆಲ್ಲವನ್ನು ಎಸ್ಐಟಿ ಅವರು ಗಮನಕ್ಕೆ ತೆಗೆದುಕೊಳ್ಳುತ್ತಾರೆ" ಎಂದು ತಿಳಿಸಿದರು.
ಭ್ರಷ್ಟಚಾರದ ಪೆನ್‌ಡ್ರೈವ್ ನನ್ನ ಬಳಿ ಇದೆ. ಅದನ್ನು ಕೊಟ್ಟರೆ ತನಿಖೆ ಮಾಡಿಸುವ ತಾಕತ್ತು ಸರ್ಕಾರಕ್ಕೆ ಇದೆಯೇ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಕುಮಾರಸ್ವಾಮಿ ಅವರು ದಿನಕ್ಕೊಂದು ಹೇಳಿಕೆ ಕೊಡುತ್ತಿರುತ್ತಾರೆ. ಪೆನ್‌ಡ್ರೈವ್ ಕೊಟ್ಟ ಬಳಿಕ ಆ ಮಾತನ್ನು ಹೇಳಬೇಕು. ನಾವು ತನಿಖೆ ಮಾಡಲಿಲ್ಲವಾದರೆ ಆರೋಪಿಸಲಿ" ಎಂದು ಹೇಳಿದರು.