ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ: ಕುಮಾರಸ್ವಾಮಿ, ಬಿಎಸ್ ವೈಗೆ ಅಮಿತ್ ಶಾ ತರಾಟೆ
ತಕ್ಷಣವೇ ಕ್ರಮ ಜರುಗಿಸಿ ಪ್ರಕರಣ ಇತ್ಯರ್ಥಗೊಳಿಸಲು ಸೂಚನೆ
Photo: fb/prajwalrewanna
ಬೆಂಗಳೂರು, ಎ.30: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪರನ್ನು ಬಿಜೆಪಿ ಹೈಕಮಾಂಡ್ ತರಾಟೆಗೈದಿದೆ ಎಂದು ತಿಳಿದುಬಂದಿದೆ.
ರಾಜ್ಯ ಮೈತ್ರಿ ನಾಯಕರಿಗೆ ಕರೆ ಮಾಡಿರುವ ಗೃಹ ಸಚಿವ ಅಮಿತ್ ಶಾ, ಈ ಪ್ರಕರಣದ ಬಗ್ಗೆ ಮೊದಲೇ ಯಾಕೆ ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಮೈತ್ರಿಯಾಗುವ ಮುನ್ನವೇ ಈ ವಿಚಾರ ಯಾಕೆ ತಿಳಿಸಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿರುವ ಅಮಿತ್ ಶಾ, ಚುನಾವಣೆ ಹೊಸ್ತಿಲಲ್ಲಿ ಈ ವಿಚಾರವನ್ನು ಮುಂದಿಟ್ಟು ಇಡೀ ದೇಶಾದ್ಯಂತ ವಿಪಕ್ಷಗಳು ಪ್ರಶ್ನೆ ಮಾಡುವಂತಾಗಿದೆ. ಪ್ರಚಾರಕ್ಕೆ ಹೋದಲೆಲ್ಲಾ ವಿಪಕ್ಷಗಳು ಪ್ರಜ್ವಲ್ ಪ್ರಕರಣವನ್ನು ಅಸ್ತ್ರವನ್ನಾಗಿ ಮಾಡಿಕೊಂಡಿವೆ ಎಂದು ಸಿಡಿಮಿಡಿಗೊಂಡಿದ್ದಾರೆ ಎನ್ನಲಾಗಿದೆ.
ಇಡೀ ದೇಶಾದ್ಯಂತ ಪ್ರಜ್ವಲ್ ವಿಚಾರ ಸದ್ದು ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಇರುವಾಗಲೇ ಕಾಂಗ್ರೆಸ್ ಪ್ರತಿಭಟನೆ ಮಾಡಿ ಮುಜುಗರ ಉಂಟು ಮಾಡಿದೆ. ಈ ಪ್ರಕರಣದಿಂದ ಎರಡನೇ ಹಂತದ ಚುನಾವಣಾ ಪ್ರಚಾರದಲ್ಲಿ ಪಕ್ಷಕ್ಕೆ ತೀವ್ರ ಮುಜುಗರವಾಗುತ್ತಿದೆ. ಆದ್ದರಿಂದ ತಕ್ಷಣವೇ ಈ ಬಗ್ಗೆ ಕ್ರಮ ಜರುಗಿಸಿ ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪರಿಗೆ ಅಮಿತ್ ಶಾ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.