ಎಲ್ಲ ಸರಕಾರಗಳು ರೈತ ವಿರೋಧಿ, ಜನ ವಿರೋಧಿಯಾಗಿಯೇ ನಡೆದುಕೊಳ್ಳುತ್ತಿವೆ : ಪ್ರಕಾಶ್ ರಾಜ್ ಆಕ್ರೋಶ
ಚನ್ನರಾಯಪಟ್ಟಣದಲ್ಲಿ ರೈತರ ಸಮಾವೇಶ
ಬೆಂಗಳೂರು : ಒಂದು ಸಾವಿರ ದಿನಗಳಿಂದ ಹೋರಾಟ ಮಾಡುತ್ತಿದ್ದರೂ ರಾಜ್ಯ ಸರಕಾರ ರೈತರ ಸಮಸ್ಯೆ ಬಗೆಹರಿಸುತ್ತಿಲ್ಲ. ಎಲ್ಲ ಸರಕಾರಗಳು ರೈತ ವಿರೋಧಿ, ಜನ ವಿರೋಧಿಯಾಗಿಯೇ ನಡೆದುಕೊಳ್ಳುತ್ತಿವೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರು ಕೆಐಎಡಿಬಿ ಭೂಸ್ವಾಧೀನವನ್ನು ವಿರೋಧಿಸಿ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯು ಹಮ್ಮಿಕೊಂಡಿದ್ದ ರೈತರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿರೋಧ ಪಕ್ಷದಲ್ಲಿದ್ದಾಗ ‘ನಾವು ಅಧಿಕಾರಕ್ಕೆ ಬಂದರೆ ರೈತರ ಪರವಾಗಿ ಇರುತ್ತೇವೆ’ ಅಂತ ಹೇಳಿದ್ದ ಸಿದ್ದರಾಮಯ್ಯನವರು, ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾಯಿತು. ಎಲ್ಲ ರಾಜಕಾರಣಿಗಳಿಗೂ ರೈತರು ಚುನಾವಣೆಯಲ್ಲಿ ವೋಟು ಹಾಕುವ ಬಟನ್‍ಗಳಷ್ಟೇ ಆಗಿದ್ದಾರೆ ಬೇರೆ ಏನೂ ಅಲ್ಲ. ಇದನ್ನು ಸಹಿಸಿಕೊಂಡಿರುವುದಕ್ಕೆ ಆಗುವುದಿಲ್ಲ, ಹೋರಾಟ ನಡಿಯಬೇಕು ಎಂದು ಪ್ರಕಾಶ್ ರಾಜ್ ಕರೆ ನೀಡಿದರು.
ಇದು ಕೇವಲ 13 ಹಳ್ಳಿಗಳ ಭೂ ಸ್ವಾಧೀನ ಸಮಸ್ಯೆ ಅಲ್ಲ. ಈ ಹೋರಾಟ ಭೂಸ್ವಾಧೀನ ಪ್ರಕ್ರಿಯೆಯನ್ನೇ ಪ್ರಶ್ನಿಸುವಂತ ಹೋರಾಟದ ಗೆಲುವಾಗಬೇಕಿದೆ. ಬದಲಾಯಿಸಬೇಕಿರುವುದು ಪ್ರಕ್ರಿಯೆಯಲ್ಲಿರುವ ಕಾನೂನುಗಳನ್ನು. ರೈತನಿಗೆ ಭೂಮಿ ಆಸ್ತಿಯಲ್ಲ, ಅದು ಅವನ ಬದುಕು. ಅವನ ಸ್ವಾಭಿಮಾನ, ಅವನ ಗುರುತು, ಅವನ ಹೆಮ್ಮೆ, ಅದು ನಿರಂತರವಾದ ಸಂಭಾಷಣೆ. ಅದನ್ನು ನೀವು ಹೇಗೆ ಕಿತ್ತುಕೊಳ್ಳುತ್ತೀರಿ ಎಂದು ಅವರು ಪ್ರಶ್ನಿಸಿದರು.
ಇಲ್ಲಿ ಹೋರಾಡುತ್ತಿರುವ ರೈತರು ನೂರಾರು ಎಕರೆ ಭೂಮಿ ಇಟ್ಟುಕೊಂಡವರಲ್ಲ, ಅವರಿಗಿರುವ 10 ಗುಂಟೆ, 20 ಗುಂಟೆ, 1-2 ಎಕರೆ ಮಾತ್ರ. ಅದರೊಳಗೆ ಈ ರೈತರು ಬದುಕುತ್ತಿದ್ದಾರೆ. ಸರಕಾರದವರು ಯಾರು ಅವರಿಗೆ ಕೆಲಸ ಕೊಡುತ್ತಿಲ್ಲ. ರೈತರು ಸ್ವಂತ ಕಾಲಮೇಲೆ ನಿಂತುಕೊಂಡು ಭೂಮಿ ಜೊತೆಗೆ ಮಾತನಾಡುತ್ತಾ, ತಲತಲಾಂತರದಿಂದ ಬದುಕನ್ನು ಕಟ್ಟಿಕೊಂಡು ಭವಿಷ್ಯ ನೋಡಿಕೊಳ್ಳುತ್ತಿರುವವರು ಎಂದು ಪ್ರಕಾಶ್ ರೈ ತಿಳಿಸಿದರು.
ಹೋರಾಟದಲ್ಲಿ ರೈತ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ, ಕರ್ನಾಟಕ ಜನಶಕ್ತಿಯ ಅಧ್ಯಕ್ಷ ನೂರ್ ಶ್ರೀಧರ್, ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಭೂಸ್ವಾಧೀನ ಹೋರಾಟ ಸಮಿತಿಯ ಕಾರೆಹಳ್ಳಿ ಶ್ರೀನಿವಾಸ್, ಭೂಮಿ, ವಸತಿ ಹಕ್ಕು ವಂಚಿತರ ಹೋರಾಟದ ಗೌರವಾಧ್ಯಕ್ಷ ಸಿರಿಮನೆ ನಾಗರಾಜ್, ರೈತ ಹೋರಾಟಗಾರ ವೀರಸಂಗಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.
‘ಬಿಜೆಪಿಯಾದರೇನು? ಕಾಂಗ್ರೆಸ್ ಆದರೇನು? ಎಲ್ಲರೂ ಕಂಠಕರೇ ನಮ್ಮ ಬದುಕಿಗೆ. ಸರಕಾರ ಯಾವುದೇ ಆದರೂ ತಪ್ಪದ ಬವಣೆ ರೈತರದು. ಕತ್ತಿ ಬಿಜೆಪಿಯವರದಾದರೆ ಮಾತ್ರ ನೋವೆ? ಕಾಂಗ್ರೆಸ್ ನವರು ಹದಹಾಕಿ ತಿವಿದರೇ ಹೂವೆ?’.
- ನೂರ್ ಶ್ರೀಧರ್, ರಾಜ್ಯಾಧ್ಯಕ್ಷ, ಕರ್ನಾಟಕ ಜನಶಕ್ತಿ