ಎಸಿಪಿ ಚಂದನ್ಗೆ ಬೆದರಿಕೆ : ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ದೂರು
Photo: fb.com/pratapsimha
ಬೆಂಗಳೂರು : ವಿಜಯನಗರ ಎಸಿಪಿ ಚಂದನ್ಗೆ ಟ್ವಿಟರ್ ಮೂಲಕ ಬೆದರಿಕೆಯೊಡ್ಡಿದ್ದಾರೆಂದು ಆರೋಪಿಸಿ ಮಾಜಿ ಸಂಸದ ಪ್ರತಾಪ್ಸಿಂಹ ವಿರುದ್ಧ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ)ದ ಯುವ ಘಟಕದ ನಿಯೋಗ ದೂರು ದಾಖಲಿಸಿದೆ.
ಪುನೀತ್ ಕೆರೆಹಳ್ಳಿ ಬಂಧನಕ್ಕೆ ಸಂಬಂಧಿಸಿದಂತೆ ಪ್ರತಾಪ್ಸಿಂಹ ಅವರು ಟ್ವೀಟ್ ಮಾಡಿ ಎಸಿಪಿ ಚಂದನ್ಗೆ ಬೆದರಿಕೆ ಹಾಕಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಹಾಗೂ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಎಎಪಿ ಯುವ ಘಟಕದ ಅಧ್ಯಕ್ಷ ಜಿ.ಎಚ್.ಲೋಹಿತ್ ಕುಮಾರ್ ಎಂಬುವರು ದೂರು ನೀಡಿದ್ದಾರೆ.
ಮಾಜಿ ಸಂಸದರ ಟ್ವೀಟ್ ರಾಜ್ಯದ ಕಾನೂನು ಹಾಗೂ ಪೊಲೀಸ್ ಇಲಾಖೆ ಮೇಲಿಟ್ಟಿರುವ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಯಾವುದೇ ದಾಖಲೆ ಇಲ್ಲದಿದ್ದರೂ ರಾಜಕೀಯ ಉದ್ದೇಶದಿಂದ ಟ್ವೀಟ್ ಮಾಡಿದ್ದಾರೆ. ಕೂಡಲೇ ಇವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಜು.30ರಂದು ಪ್ರತಾಪ್ಸಿಂಹ ಅವರು, ‘ಸಹೋದರ ಪುನೀತ್ ಕೆರೆಹಳ್ಳಿ ಬಿಡುಗಡೆ ಆಗಿದ್ದಾನೆ. ಆತನನ್ನು ಠಾಣೆಯಲ್ಲಿ ಬೆತ್ತಲುಗೊಳಿಸಿ ಹಿಂಸೆ ಕೊಟ್ಟಿರುವ ಎಸಿಪಿ ಚಂದನ್, ಜು.31ಕ್ಕೆ ಸ್ಟೇಷನ್ಗೆ ಬರುತ್ತೇನೆ, ನೀವು ಇರಬೇಕು. ಎಲ್ಲರೂ ಬಸವೇಶ್ವರನಗರದ ಎಸಿಪಿ ಕಚೇರಿ ಎದುರು ಬೆಳಗ್ಗೆ 10 ಗಂಟೆಗೆ ಬನ್ನಿ’ ಎಂದು ಟ್ವಿಟರ್ನಲ್ಲಿ ಬಸವೇಶ್ವರ ನಗರ ಪೊಲೀಸ್ ಠಾಣೆಯ ಫೋಟೋ ಜೊತೆಗೆ ಪೋಸ್ಟ್ ಮಾಡಿ ಕಾರ್ಯಕರ್ತರಿಗೆ ಆಹ್ವಾನ ನೀಡಿದ್ದರು.