ಪ್ರತಾಪ್ ಸಿಂಹ ಭಯೋತ್ಪಾದಕರ ಬೆಂಬಲಿಗ ಎಂದರೆ ತಪ್ಪಾಗುತ್ತದೆಯೇ? : ಕಾಂಗ್ರೆಸ್
ಬೆಂಗಳೂರು : ‘ಸೈದ್ದಾಂತಿಕ ಬಿನ್ನಾಭಿಪ್ರಾಯದ ಒಂದೇ ಕಾರಣಕ್ಕೆ ಸಂಘಟಿತ ಸಂಚು ನಡೆಸಿ ಹತ್ಯೆ ಮಾಡುವುದು ಭಯೋತ್ಪಾದಕ ಕೃತ್ಯಕ್ಕೆ ಸಮನಾಗುತ್ತದೆ. ಐಸಿಸ್, ಹಿಜ್ಬುಲ್ ಮುಜಾಹಿದ್ದಿನ್‍ನಂತಹ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವವರಿಗೂ ಪತ್ರಕರ್ತ ಗೌರಿ ಲಂಕೇಶ್ ಹಂತಕರನ್ನು ಬೆಂಬಲಿಸುವವರಿಗೂ ಯಾವುದೇ ವ್ಯತ್ಯಾಸವಿಲ್ಲ’ ಎಂದು ಕಾಂಗ್ರೆಸ್ ಇಂದಿಲ್ಲಿ ವಾಗ್ದಾಳಿ ನಡೆಸಿದೆ.
ಮಂಗಳವಾರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ಮಾಜಿ ಸಂಸದ ಪ್ರತಾಪ್ ಸಿಂಹ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರು ವರ್ಷ ಜೈಲಿನಲ್ಲಿದ್ದ ಇತ್ತೀಚೆಗೆ ಬಿಡುಗಡೆಗೊಂಡಿರುವ ನವೀನ್ ಭೇಟಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕೊಲೆಗಾರನೊಂದಿಗೆ ಕುಶಲೋಪರಿ ನಡೆಸಿ, ಅದನ್ನು ಸಾಧನೆ ಎಂಬಂತೆ ಹೆಮ್ಮೆಯಿಂದ ಹೇಳಿಕೊಳ್ಳುವ ಪ್ರತಾಪ್ ಸಿಂಹ ಭಯೋತ್ಪಾದಕರ ಬೆಂಬಲಿಗ ಎಂದರೆ ತಪ್ಪಾಗುತ್ತದೆಯೇ?’ ಎಂದು ಪ್ರಶ್ನಿಸಿದೆ.
‘ಬಾಡಿಗೆ ಭಾಷಣಕಾರನಿಗೆ ವಿನಾಯಕ ಬಾಳಿಗಾ ಹಂತಕ ಸ್ನೇಹಿತ, ಮಾಜಿ ಬಾಡಿಗೆ ಬರಹಗಾರನಿಗೆ ಗೌರಿ ಲಂಕೇಶ್ ಹಂತಕ ಸ್ನೇಹಿತ. ಹಂತಕರ ಬೆಂಬಲಕ್ಕೆ ನಿಂತಿರುವ ಇಂತಹವರಿಗೆ ‘ಅರ್ಬನ್ ಟೆರರಿಸ್ಟ್’ ಎಂಬ ಹೆಸರು ಸೂಕ್ತವಾದೀತು!’ ಎಂದು ಕಾಂಗ್ರೆಸ್ ಟೀಕಿಸಿದೆ.