ಪ್ರಧಾನಿ ಮೋದಿಯ ಭಾಷಣ ತಿರುಚಿದ ಆರೋಪ | ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿಯಿಂದ ದೂರು
ಬೆಂಗಳೂರು : ಪ್ರಧಾನಿ ಮೋದಿ ಅವರ ಭಾಷಣದ ವಿಡಿಯೋವನ್ನು ತಿರುಚಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆಂದು ಆರೋಪಿಸಿ ಬಿಜೆಪಿ ಕಾನೂನು ಪ್ರಕೋಷ್ಟ ಶಿವಕುಮಾರ್ ಯಾದವ್ ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಸೋಮವಾರ ದೂರು ನೀಡಿದ್ದಾರೆ.
ಮೋದಿಯವರು ತಮ್ಮ ಸರಕಾರದಿಂದ ನೀಡುತ್ತಿದ್ದ ಕಿಸಾನ್ ಸಮ್ಮಾನ್ ಯೋಜನೆಯ ಬಗ್ಗೆ ಮಾತನಾಡಿ, ಕರ್ನಾಟಕದಲ್ಲಿ ಬಿಜೆಪಿ ಸರಕಾರವಿದ್ದಾಗ ಕಿಸಾನ್ ಸಮ್ಮಾನ್ ಯೋಜನೆಯಡಿ 4 ಸಾವಿರ ರೂ, ನೀಡುತ್ತಿದ್ದು, ಕಾಂಗ್ರೆಸ್ ಸರಕಾರ ಬಂದ ನಂತರ ಈ ಯೋಜನೆಯನ್ನು ನಿಲ್ಲಿಸಿತು ಎಂದು ಹೇಳಿರುವ ಭಾಷಣವನ್ನು ತಮಗೆ ಬೇಕಾದಂತೆ ಕತ್ತರಿಸಿ ಸಂಪೂರ್ಣ ವಾಕ್ಯವು ಮೋದಿಯವರು ಕರ್ನಾಟಕ ವಿರೋಧಿಗಳು ಎಂಬ ಭಾವನೆ ಬರುವಂತೆ ಚಿತ್ರಿಸಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಿರುಚಿರುವ ಈ ವಿಡಿಯೋ ಕಾನೂನು ಬಾಹಿರವಾಗಿದ್ದು, ಈ ರೀತಿಯ ವಿಡಿಯೋವನ್ನು ಹಂಚಿಕೊಂಡು ಕನ್ನಡಿಗರ ಮನಸ್ಸಿನಲ್ಲಿ ಪ್ರಧಾನಿ ಮೋದಿ ಅವರ ಮೇಲೆ ದ್ವೇಷ ಭಾವನೆ ಬರುವಂತೆ ಮಾಡುವ ದುರುದ್ದೇಶದಿಂದ ಈ ಅಪರಾಧ ಕೃತ್ಯವನ್ನು ಮಾಡಿರುವ ಪ್ರಿಯಾಂಕ್ ಖರ್ಗೆ ವಿರುದ್ಧ ಸೂಕ್ರ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.