ಮೇಕೆದಾಟು-ಎತ್ತಿನಹೊಳೆ ಯೋಜನೆಗಳಿಗೆ ಆದ್ಯತೆ : ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕಾವೇರಿ ಕಣಿವೆಯ ಮಹತ್ವಾಕಾಂಕ್ಷಿ ಯೋಜನೆಯಾದ ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕಾಗಿ ಅಗತ್ಯ ತೀರುವಳಿಗಳನ್ನು ಸಕ್ಷಮ ಪ್ರಾಧಿಕಾರಗಳಿಂದ ಪಡೆದು ಶೀಘ್ರವಾಗಿ ಪ್ರಾರಂಭಿಸಲು ಆದ್ಯತೆ ಮೇರೆಗೆ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‍ನಲ್ಲಿ ಪ್ರಕಟಿಸಿದ್ದಾರೆ.
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಯೋಜನೆಯ ಎಲ್ಲ ಲಿಫ್ಟ್ ಕಾಮಗಾರಿಗಳನ್ನು ಪೂರ್ಣಗೊಳಿಸಿ ಗುರುತ್ವ ಕಾಲುವೆಗೆ ನೀರು ಹರಿಸವುದರ ಜೊತೆಗೆ ಸಮತೋಲನಾ ಜಲಾಶಯದ ಕಾಮಗಾರಿ ಪ್ರಾರಂಭ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಯೋಜನೆಯಡಿಯ ಉಪ ಯೋಜನೆಗಳನ್ನು ಪೂರ್ಣಗೊಳಿಸಲು ಹಾಗೂ ಇದರಡಿ ಭೂಸ್ವಾಧೀನ ಮತ್ತು ಪುನರ್ ವಸತಿ ಹಾಗೂ ಪುನರ್ ನಿರ್ಮಾಣಕ್ಕೆ ಆದ್ಯತೆ. ಕೃಕೃಷ್ಣಾ ನ್ಯಾಯಾಧಿಕರಣ-2ರ ಅಂತಿಮ ತೀರ್ಪಿನ ಬಾಕಿಯಿರುವ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸುವುದರೊಂದಿಗೆ ಅಗತ್ಯವಿರುವ ಕಾನೂನಾತ್ಮಕ ಕ್ರಮಗಳನ್ನು ಮುಂದುವರೆಸುವುದಾಗಿ ಪ್ರಕಟಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಸರಕಾರ ತನ್ನ 2023-24ನೆ ಸಾಲಿನ ಬಜೆಟ್‍ನಲ್ಲಿ ಘೋಷಿಸಿರುವ 5,300 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯಿಸುವುದು. ಹಾಗೂ ಪ್ರಸಕ್ತ ಸಾಲಿನಲ್ಲಿ ಈ ಯೋಜನೆಯಡಿ ರಾಜ್ಯ ಸರಕಾರವು ಚಿತ್ರದುರ್ಗ ಜಿಲ್ಲೆಯ ಸುಮಾರು 75 ಸಾವಿರ ಎಕರೆ ನೀರಾವರಿ ಸಾಮಥ್ರ್ಯ ಕಲ್ಪಿಸಲು ಯೋಜಿಸಲಾಗಿದೆ.
ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಸಂಗ್ರಹಣೆಯಿಂದ ಉಂಟಾಗಿರುವ ನೀರು ಸಂಗ್ರಹಣೆ ಸಾಮಥ್ರ್ಯದ ಕೊರತೆ ನಿವಾರಿಸಲು ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣ ಯೋಜನೆಯ 15,600 ಕೋಟಿ ರೂ. ಮೊತ್ತದ ವಿವರವಾದ ಯೋಜನಾ ವರದಿ ಸಿದ್ಧವಾಗಿದ್ದು, ಈ ಯೋಜನೆಯ ಅನುಷ್ಠಾನ ಸಂಬಂಧ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಸಮಾಲೋಚನೆ ಪ್ರಕ್ರಿಯೆ ಚಾಲನೆಗೊಳಿಸಿದ್ದು, ಯೋಜನೆ ಕಾರ್ಯಗತಗೊಳಿಸಲು ಆದ್ಯತೆ.
ಕೆ.ಆರ್.ಎಸ್ ಬಳಿಯ ಬೃಂದಾವನ ಉದ್ಯಾನವನವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ವಿಶ್ವದರ್ಜೆಯ ಪ್ರವಾಸೋದ್ಯಮ ಆಕರ್ಷಣೀಯ ಕೇಂದ್ರವನ್ನಾಗಿ ಉನ್ನತೀಕರಣ. ಧಾರವಾಡದಲ್ಲಿರುವ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯನ್ನು (ವಾಲ್ಮಿ) ಪ್ರಸಕ್ತ ಸಾಲಿನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ವಾಟರ್ ಮ್ಯಾನೇಜ್‍ಮೆಂಟ್ ಆಗಿ ಉನ್ನತೀಕರಣ.
ಪಾವಗಡ ಸೋಲಾರ್ ಪಾರ್ಕ್ ಮಾದರಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಜಲಸಂಪನ್ಮೂಲ ಇಲಾಖೆಯ ಮಾಲಕತ್ವದ ಜಮೀನಿನಲ್ಲಿ ಮತ್ತು ಜಲಾಶಯಗಳ ಹಿನ್ನೀರಿನಲ್ಲಿ ಸೂಕ್ತ ಮಾದರಿಯ ಸೋಲಾರ್ ಪಾರ್ಕ್‍ಗಳ ಸ್ಥಾಪನೆ. ಹೇಮಾವತಿ ಯೋಜನೆ ವೈನಾಲೆಯಡಿ 5.45 ಕಿ.ಮೀ ಉದ್ದದ ಹಾಗೂ ತುಮಕೂರು ಶಾಖಾ ನಾಲೆಯಡಿ 166.90 ಕಿ.ಮೀ. ಉದ್ದದ ನಾಲೆಯ ಆಧುನೀಕರಣ ಕಾಮಗಾರಿಗಳು ಪ್ರಸಕ್ತ ಸಾಲಿನಲ್ಲಿ ಪೂರ್ಣ.
ಕಾವೇರಿ ನೀರಾವರಿ ನಿಗಮದಡಿ ವಿಶ್ವೇಶ್ವರಯ್ಯ ನಾಲಾ ಜಾಲದ ಹೆಬ್ಬಕವಾಡಿ, ನಿಡಘಟ್ಟ, ತುರುಗನೂರು, ಮಳವಳ್ಳಿ ತಾಲೂಕಿನ ಮಾದವಮಂತ್ರಿ ನಾಲೆಗಳ ಹಾಗೂ ಮದ್ದೂರು ತಾಲೂಕು ಕೆಮ್ಮಣ್ಣುನಾಲಾ ಆಧುನೀಕರಣ, ಹುಣಸೂರು ತಾಲೂಕಿನ ಮರದೂರು, ಕನಕಪುರದ ಹೆಗ್ಗನೂರು ಕೆರೆ ತುಂಬಿಸುವ ಯೋಜನೆಗಳು, ಶ್ರೀರಂಗ ಕುಡಿಯುವ ನೀರು ಯೋಜನೆಗೆ ಪೈಪ್‍ಲೈನ್ ಮೂಲಕ ನೀರು ಒದಗಿಸುವ ಯೋಜನೆ, ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ನಾಲೆಗಳ ಅಭಿವೃದ್ಧಿ, ಗುಬ್ಬಿಯ ಮಠದಹಳ್ಳಿ ಕುಡಿಯುವ ನೀರು ಯೋಜನೆ, ರಾಮನಗರದ ಬಳಿ ಅರ್ಕಾವತಿ ರಿವರ್ ಫ್ರಂಟ್ ಡೆವಲಪ್‍ಮೆಂಟ್ ಯೋಜನೆಗಳನ್ನು ಅಂದಾಜು 2 ಸಾವಿರ ಕೋಟಿ ರೂ.ಮೊತ್ತದಲ್ಲಿ ಕೈಗೆತ್ತಿಕೊಳ್ಳಲಾಗುವುದು.
ಕಲಬುರಗಿ ನಗರಕ್ಕೆ ಕುಡಿಯುವ ನೀರು ಸರಬರಾಜಿಗಾಗಿ ಬೆಣ್ಣೆತೊರಾ ಜಲಾಶಯಕ್ಕೆ ಭೀಮಾ ಮತ್ತು ಕಾಗಿಣಾ ನದಿಗಳಿಂದ ನೀರು ತುಂಬಿಸುವ 365 ಕೋಟಿ ರೂ. ಮೊತ್ತದ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಕೈಗೆತ್ತಿಕೊಳ್ಳಲಾಗುವುದು. ಧಾರವಾಡ ಜಿಲ್ಲೆಯಲ್ಲಿ ಬೆಣ್ಣೆಹಳ್ಳದಿಂದ ಪ್ರವಾಹ ಪೀಡಿತ ಗ್ರಾಮಗಳಿಗೆ ತಡೆಗೋಡೆ ನಿರ್ಮಾಣ ಮಾಡಲು ರಾಜ್ಯ ವಿಪತ್ತು ಉಪಶಮನ ನಿಧಿಯಿಂದ ಯೋಜನೆ ರೂಪಿಸಲಾಗುವುದು.