‘ಕಥೆಗಳ ಸೂಕ್ಷ್ಮತೆ’ ಅರಿವಾಗಿದ್ದು ಲಂಕೇಶ್, ಅನಂತಮೂರ್ತಿ ಕಾಲದಲ್ಲಿ: ಪ್ರೊ.ಮುಕುಂದರಾಜ್
ಬೆಂಗಳೂರು : ಕಥೆಗಳ ಸೂಕ್ಷ್ಮತೆಯ ಬಗ್ಗೆ ಅರಿವಾಗಿದ್ದು ನವ್ಯರ ಕಾಲದಲ್ಲಿ. ಅದು ಲೇಖಕರಾದ ಪಿ.ಲಂಕೇಶ್, ಅನಂತಮೂರ್ತಿ, ತೇಜಸ್ವಿ ಅವರು ಕಥೆಗಳನ್ನು ಬರೆದಾಗಲೇ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪ್ರೊ.ಎಲ್.ಎನ್.ಮುಕುಂದರಾಜ್ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ನಗರದ ರೇವಾ ವಿವಿಯ ಕಲಾ, ಮಾನವಿಕ ಮತ್ತು ಸಮಾಜ ವಿಜ್ಞಾನ ಅಧ್ಯಯನ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ವಿಚಾರ ಸಂಕಿರಣ ಕನ್ನಡ ಕಥಾ ಸಾಹಿತ್ಯ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡದಲ್ಲಿ ಸಣ್ಣಕಥೆಗಳ ಸಾಹಿತ್ಯ ಇರಲಿಲ್ಲ. ನೂರು ವರ್ಷಗಳಿಂದೀಚಿಗೆ ಮಾತ್ರ ಸಾಹಿತ್ಯ ಪ್ರಕಾರವಾಗಿ ಬೆಳೆದು ಬಂದಿರುವುದು ಎಂದು ಹೇಳಿದರು.
ಸಣ್ಣ ಕಥೆಗಳನ್ನು ಪಂಜೆ ಮಂಗೇಶ್ರಾಯ್, ಮಾಸ್ತಿ ವೆಂಕಟೇಶ್ ಅಯ್ಯಂಗರ್ ಬರೆದಿದ್ದರು. ನಂತರದಲ್ಲಿ ಕುವೆಂಪು ಸಣ್ಣ ಕಥೆಗಳನ್ನು ಬರೆಯುತ್ತಿದ್ದರು. ಆದರೆ ನವ್ಯರ ಕಾಲಕ್ಕೆ ಕನ್ನಡ ಕಥೆಗಳ ಸೂಕ್ಷ್ಮತೆಯ ಪರಿಣಾಮ ಬೀರಿದ್ದು ಲಂಕೇಶ್, ಅನಂತಮೂರ್ತಿ, ತೇಜಸ್ವಿ ಅವರು ಕಥೆಗಳನ್ನು ಬರೆದರೋ ಆಗ ನಿಜವಾದ ಕನ್ನಡ ಕಥೆಗಳ ಸ್ವರೂಪ ಅರ್ಥವಾಗಿದ್ದು. ಈಗ ದೇವನೂರು ಮಹಾದೇವ, ಕುಂ.ವಿ. ಅಂತಹವರು ಸಣ್ಣ ಕಥೆಗಳನ್ನು ಬರೆಯುತ್ತಾ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿದ್ದಾರೆಂದು ಮುಕುಂದರಾಜ್ ತಿಳಿಸಿದರು.
ಇದೀಗ ಹೊಸ ತಲೆಮಾರಿನ ಕಥೆಗಾರರು ಅದ್ಬುತವಾಗಿ ಕಥೆಗಳನ್ನು ಬರೆಯುತ್ತಾ, ವಿಶ್ವ ದರ್ಜೆಯ ಕಥೆಗಾರರಾಗಿ ಬೆಳೆದಿರುವುದು ಹೆಮ್ಮೆಯ ಸಂಗತಿ. ಈ ಹಿಂದೆ ಹಳ್ಳಿಗಳಲ್ಲಿ ಪೂರ್ವಿಕರಿಗೆ ಶಿಕ್ಷಣ ಇಲ್ಲದೇ ಇರುವುದರಿಂದ ಹಿರಿಯರು ಮಕ್ಕಳನ್ನು ಕೂರಿಸಿಕೊಂಡು ಜನಪದ ಕಥೆಗಳನ್ನು ಹೇಳುತ್ತಿದ್ದರು. ನಾವೆಲ್ಲರೂ ಅಕ್ಷರ ಕಲಿತ ಮೇಲೆಯೆ ಕಥೆಗಳನ್ನು ಓದಿದ್ದು. ಇಂದು ಕನ್ನಡ ಕಥಾ ಲೋಕ ಅತ್ಯಂತ ಸಾರ್ಥಕವಾಗುವ ರೀತಿಯಲ್ಲಿ ಬೆಳೆದಿದೆ. ಅದರ ಬಗ್ಗೆ ಅನೇಕರು ಅಧ್ಯಯನ ಮಾಡುತ್ತಿದ್ದಾರೆ ಎಂದು ಅವರು ನುಡಿದರು.
ಕನ್ನಡ ಸಾಹಿತ್ಯ ಪರಂಪರೆ ವಿಭಿನ್ನವಾದ ಮಾದರಿಯಲ್ಲಿದೆ. ಕನ್ನಡದಲ್ಲಿ ಮೊದಲಿಗೆ ಕಥೆ, ಕಾದಂಬರಿ, ನಾಟಕ ಇಲ್ಲದಿದ್ದರೂ, ಕಾವ್ಯ ಎನ್ನುವುದು ಇತ್ತು. ಅದು ಜಾತ್ಯತೀತ ಪ್ರಜ್ಞೆಯನ್ನು ಕನ್ನಡಿಗರಲ್ಲಿ ತುಂಬುತ್ತಿತ್ತು. ಆ ಪ್ರಜ್ಞೆಯು ಪಂಪರ ಕಾಲದಿಂದಲೇ ಶುರುವಾಗಿತ್ತು. ಆ ನಂತರದಲ್ಲಿ ಬಸವಾದಿ ಶರಣರು ಮಾಡಿರುವ ಕೆಲಸ ಅದ್ಬುತವಾದದ್ದು. ಅವರು ಸಮಸಮಾಜದ ನಿರ್ಮಾಣಕ್ಕಾಗಿ ಬುನಾದಿಯನ್ನು ಹಾಕಿಕೊಟ್ಟರು. ಹೊಸ ರೀತಿಯ ಚಳವಳಿಯನ್ನು ಕಟ್ಟಿದರು. ಕುವೆಂಪು ಅಂತಹವರು ಮುಂದುವರೆಸಿದರು. ಕನ್ನಡಿಗರು ಹೆಮ್ಮೆ ಪಡುವಂತಹ ಸಾಹಿತ್ಯ ಪರಂಪರೆ ನಮ್ಮದು ಎಂದು ಎಲ್.ಎನ್.ಮುಕುಂದರಾಜ್ ಸ್ಮರಿಸಿದರು.
ಕುಲಪತಿ ಡಾ.ಎನ್.ರಮೇಶ್, ಕುಲಸಚಿವ ಡಾ.ಕೆ.ಎಸ್. ನಾರಾಯಣಸ್ವಾಮಿ, ಡಾ.ರಘು ಸಿ.ಎನ್., ಕನ್ನಡ ವಿಭಾಗದ ಮುಖ್ಯಸ್ಥ ಪುನೀತ್ ಕುಮಾರ್ ಎಲ್. ಸೇರಿದಂತೆ ಹಲವರು ಭಾಗವಹಿಸಿದ್ದರು.