ಫೆ.5ಕ್ಕೆ ಕೇಂದ್ರ ಸರಕಾರದ ಬಜೆಟ್ ಪ್ರತಿ ಸುಟ್ಟು ಪ್ರತಿಭಟನೆ

ಸಾಂದರ್ಭಿಕ ಚಿತ್ರ
ಬೆಂಗಳೂರು : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಕಾರ್ಪೊರೇಟ್ಗಳಿಗೆ ಮತ್ತು ಶ್ರೀಮಂತರಿಗಾಗಿಯೇ ತಯಾರಿಸಿದ, ಬಡವರ ವಿರೋಧಿ ಆಯವ್ಯಯ. ಇದು ರೈತ, ಕಾರ್ಮಿಕರ ಜೀವನೋಪಾಯದ ಮೇಲಿನ ಆಕ್ರಮಣ ಮಾಡಲಿದೆ. ಹೀಗಾಗಿ ಫೆ.5ರಂದು ಬಜೆಟ್ ಪ್ರತಿ ಸುಟ್ಟು ಪ್ರತಿಭಟನೆ ನಡೆಸಲಾಗುವುದು ಎಂದು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್), ಕರ್ನಾಟಕ ಪ್ರಾಂತ ರೈತ ಸಂಘ ಎಚ್ಚರಿಸಿದೆ.
ಶನಿವಾರ ಜಂಟಿ ಪ್ರಕಟಣೆ ನೀಡಿರುವ ಉಪಾಧ್ಯಕ್ಷ ಯು.ಬಸವರಾಜ ಮತ್ತು ಪ್ರಧಾನ ಕಾರ್ಯದರ್ಶಿ ಟಿ.ಯಶವಂತ, ‘ಜಿಡಿಪಿಗೆ ಕೃಷಿ ಮತ್ತು ಸಂಬಂಧಿತ ವಲಯಗಳ ಕೊಡುಗೆಯು ಬಜೆಟ್ನಲ್ಲಿ 16 ಪ್ರತಿಶತಕ್ಕೆ ಏರಿದೆ. ಆದರೆ 2024-25ರ ಪರಿಷ್ಕೃತ ಅಂದಾಜುಗಳಿಗಿಂತ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಹಂಚಿಕೆ ಕಡಿಮೆಯಾಗಿದೆ’ ಎಂದು ಟೀಕಿಸಿದ್ದಾರೆ.
ಬಿಜೆಪಿ ನೇತೃತ್ವದ ಎನ್ಡಿಎ ಸರಕಾರದಲ್ಲಿ ರೈತರಿಗೆ ಆದ್ಯತೆ ಇಲ್ಲ ಎಂಬುದು ಸ್ಪಷ್ಟ. ಎಂಎಸ್ಪಿಗೆ ಕಾನೂನು ಜಾರಿ ಕುರಿತು, ಕೃಷಿ ಉತ್ಪನ್ನಗಳ ಖರೀದಿ ವಿಸ್ತರಣೆ ಕುರಿತು ಬಜೆಟ್ನಲ್ಲಿ ಏನೂ ಇಲ್ಲ. ರೈತರನ್ನು ಸಾಲಭಾಧೆಯಿಂದ ಮುಕ್ತಗೊಳಿಸುವ, ಲಾಭದಾಯಕ ಬೆಲೆಗಳನ್ನು ಖಚಿತಪಡಿಸಿಕೊಳ್ಳುವ ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸನ್ನೂ ಗಾಳಿಗೆ ತೂರಲಾಗಿದೆ ಎಂದು ದೂರಿದ್ದಾರೆ.
ಸರಕಾರದ ಪ್ರಮುಖ ಕಾರ್ಯಕ್ರಮವಾದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ಬೆಳೆ ವಿಮೆಗೆ ನೀಡಲಾದ ಹಂಚಿಕೆಯು 15,864 ಕೋಟಿ ರೂ.ಗಳಿಂದ 12,242.27 ಕೋಟಿ ರೂ.ಗಳಿಗೆ ತೀವ್ರ ಕಡಿತವನ್ನು ಕಂಡಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಗೆ ಹಂಚಿಕೆಯಲ್ಲಿ ಹೆಚ್ಚಳವಾಗಿಲ್ಲ ಮತ್ತು ಯೋಜನೆಯು ಮೊದಲ ಬಾರಿಗೆ ಪ್ರಾರಂಭವಾದ 2019ರಿಂದ ಹಣದುಬ್ಬರಕ್ಕೆ ಯಾವುದೇ ಹೊಂದಾಣಿಕೆ ಇಲ್ಲ. ರಸಗೊಬ್ಬರ ಸಬ್ಸಿಡಿಯನ್ನು 171298.50 ಕೋಟಿ ರೂ.ಗಳಿಂದ 167887.20 ಕೋಟಿ ರೂ.ಗಳಿಗೆ ಕಡಿತಗೊಳಿಸಲಾಗಿದೆ ಎಂದು ಟೀಕಿಸಿದ್ದಾರೆ.
ಬೆಲೆ ಸ್ಥಿರತೆ ಖಚಿತಪಡಿಸಿಕೊಳ್ಳಲು NAFED ಮತ್ತು NCCF ಮುಂದಿನ 4 ವರ್ಷಗಳ ವರೆಗೆ ಬೇಳೆಕಾಳುಗಳನ್ನು ಸಂಗ್ರಹಿಸುತ್ತವೆಂಬ ಹೇಳಿಕೆಯಲ್ಲಿ ಹೊಸದೇನೂ ಇಲ್ಲ. ಇದು ಖಾಸಗಿ ವಲಯವು MSPನಲ್ಲಿ ಖರೀದಿಸಲು ಸಿದ್ಧರಿಲ್ಲ ಎಂಬ ಅಂಶವನ್ನು ಬಹಿರಂಗಪಡಿಸುತ್ತದೆ. ಕಡಿಮೆ ಇಳುವರಿ ಇರುವ 100 ಜಿಲ್ಲೆಗಳಿಗೆ ಸೇರಿದ 1,7ಕೋಟಿ ರೈತರಿಗೆ ಅನುಕೂಲವಾಗಲಿದೆ ಎಂದು ‘ಧನ್ ಧ್ಯಾನ್ ಕೃಷಿ ಯೋಜನೆ ಘೋಷಿಸಲಾಗಿದೆ. ಆದರೆ ಅದಕ್ಕೆ ಪ್ರತ್ಯೇಕ ಅನುದಾನ ಒದಗಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.