ಸಿದ್ದರಾಮಯ್ಯ ವಿರುದ್ಧ ಕೋಟ ಶ್ರೀನಿವಾಸ ಪೂಜಾರಿಯಿಂದ ವಿಧಾನಸೌಧದ ಎದುರು ಧರಣಿ
'ನನ್ನ ಮೇಲಿನ ಹಗರಣದ ಆರೋಪ ಹಿಂಪಡೆಯಿರಿ, ಇಲ್ಲವಾದಲ್ಲಿ ಸಿಬಿಐ ತನಿಖೆಗೆ ವಹಿಸಿ'
ಬೆಂಗಳೂರು: ‘ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿದ್ದ ಅವಧಿಯಲ್ಲಿ ಭೋವಿ ಅಭಿವೃದ್ಧಿ ನಿಗಮ ಹಾಗೂ ಗಂಗಾ ಕಲ್ಯಾಣ ಯೋಜನೆಯಲ್ಲಿ ಹಗರಣ ಆಗಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಆರೋಪವನ್ನು ವಿರೋಧಿಸಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಸಾಂಕೇತಿಕ ಧರಣಿ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ ಅವರು, ತನ್ನ ಮೇಲಿನ ಸತ್ಯಕ್ಕೆ ದೂರವಾದ ಆರೋಪವನ್ನು ಹಿಂಪಡೆಯಿರಿ. ಇಲ್ಲವಾದರೆ ಸಿಬಿಐ ತನಿಖೆಗೆ ಶಿಫಾರಸು ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆದು ಮನವಿ ಮಾಡಿದ್ದೆ. ಆದರೆ ಈ ಬಗ್ಗೆ ಮುಖ್ಯಮಂತ್ರಿಯ ಮೌನ ನೋವು ತಂದಿದೆ. ಆದ್ದರಿಂದ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಸಾಂಕೇತಿಕವಾಗಿ ಧರಣಿ ಕೂತಿದ್ದೇನೆ, ರಾಜ್ಯದ ಜನತೆ ತೀರ್ಪು ನೀಡಲಿ ಎಂದು ಹೇಳಿದರು.
ಮುಖ್ಯಮಂತ್ರಿ ವಿರುದ್ಧ ಮಾನನಷ್ಟ ಮೊಕದ್ದಮೆ : ಈ ಹಿಂದೆ ನಾನು ಸಮಾಜ ಕಲ್ಯಾಣ ಸಚಿವರಾಗಿದ್ದ ಅವಧಿಯಲ್ಲಿ ಕೊಳವೆ ಬಾವಿ ಟೆಂಡರ್ ಪ್ರಕ್ರಿಯೆಯಲ್ಲಿ ಹಗರಣ ನಡೆದಿದೆ ಎಂಬ ಆರೋಪವನ್ನು ಅಂದಿನ ವಿರೋಧ ಪಕ್ಷ ಕಾಂಗ್ರೆಸ್ ಮಾಡಿತ್ತು. ಈ ಆರೋಪವನ್ನು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದ ಒಳಗೂ, ಹೊರಗೂ ನನ್ನ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಆದರೆ, ನಾನು ಒಂದು ರೂಪಾಯಿ ಭ್ರಷ್ಟಾಚಾರ ಮಾಡಿಲ್ಲ. ಒಂದು ವೇಳೆ ಭ್ರಷ್ಟಾಚಾರ ಮಾಡಿದ್ದರೆ ಸಿಬಿಐ ತನಿಖೆಗೆ ವಹಿಸಿ ಎಂದು ಒತ್ತಾಯಿಸಿದರು.
ನನ್ನ ಮೇಲೆ ಮಾಡಿರುವ ಆರೋಪವನ್ನು ಹಿಂಪಡೆಯಬೇಕು. ಇಲ್ಲದಿದ್ದರೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವ ಬಗ್ಗೆ ಯೋಚನೆ ಮಾಡಿ ತೀರ್ಮಾನಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಎಸ್.ಸುರೇಶ್ ಕುಮಾರ್, ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸದಸ್ಯ ರವಿಕುಮಾರ್ ಸೇರಿದಂತೆ ಪ್ರಮುಖರಿದ್ದರು.