‘ವಾರ್ತಾಭಾರತಿ ವರದಿ’ ಬೆನ್ನಲ್ಲೇ 545 ಪಿಎಸ್ಸೈ ನೇಮಕಾತಿ ಆದೇಶ ಪತ್ರ

ಬೆಂಗಳೂರು : ವಾರ್ತಾಭಾರತಿ ಪತ್ರಿಕೆಯಲ್ಲಿ ಡಿ.28ರಂದು ‘545 ಪಿಎಸ್ಸೈ ನೇಮಕಾತಿ ಆದೇಶ ಪತ್ರ ನೀಡುವಲ್ಲಿ ವಿಳಂಬ ಧೋರಣೆ’ ಎಂಬ ವಿಶೇಷ ವರದಿ ಪ್ರಕಟಿಸಿದ ಬೆನ್ನಲ್ಲೇ ಸರಕಾರ ಪಿಎಸ್ಸೈ ಹುದ್ದೆ ಆಕಾಂಕ್ಷಿಗಳಿಗೆ ಆದೇಶ ಪತ್ರ ನೀಡಿದೆ.
2021ರಲ್ಲಿ ಅಧಿಸೂಚನೆ ಹೊರಡಿಸಿದ್ದ 545 ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಆದೇಶ ಪತ್ರ ನೀಡುವಲ್ಲಿ ಸರಕಾರ ವಿಳಂಭ ಧೋರಣೆ ಅನುಸರಿಸುತ್ತಿದ್ದು, ಇದೀಗ ಸರಕಾರ ನೇಮಕಾತಿ ಆದೇಶ ಪತ್ರ ನೀಡಿರುವುದರಿಂದ 545 ಪಿಎಸ್ಸೈ ಹುದ್ದೆ ಆಕಾಂಕ್ಷಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ನಾವು ಕಳೆದ ವರ್ಷ ಪಿಎಸ್ಸೈ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದೇವೆ. ಆದರೆ ದೈಹಿಕ ತಪಾಸಣೆ ಹಾಗೂ ದಾಖಲೆಗಳ ಪರಿಶೀಲನೆ ಆಗಿ ಹಲವು ದಿನಗಳು ಕಳೆದರೂ ನಮಗೆ ಆದೇಶ ಪತ್ರಗಳನ್ನು ಸರಕಾರ ನೀಡದೆ ಇರುವ ಸಂದರ್ಭದಲ್ಲಿ ಜನಪರ ಕಾಳಜಿಯ ‘ವಾರ್ತಾಭಾರತಿ ಪತ್ರಿಕೆ’ಯು ನಮ್ಮ ಬೆಂಬಲಕ್ಕೆ ನಿಂತು ವರದಿ ಪ್ರಕಟಿಸಿ, ಆದೇಶ ಪತ್ರಗಳನ್ನು ನೀಡುವಲ್ಲಿ ಪಾತ್ರವಹಿಸಿದೆ. ಆಯ್ಕೆಯಾದ ಎಲ್ಲ ಪಿಎಸ್ಸೈಗಳ ಪರವಾಗಿ ಪತ್ರಿಕೆಗೆ ಧನ್ಯವಾದಗಳು ಎಂದು ನೂತನ ಪಿಎಸ್ಸೈಯೊಬ್ಬರು ತಿಳಿಸಿದ್ದಾರೆ.