ಬೆಂಗಳೂರು | ಅನಧಿಕೃತವಾಗಿ ನೀರು ಸಂಪರ್ಕ ಪಡೆದಿರುವ ಪಿಜಿಗಳ ವಿರುದ್ದ ತ್ವರಿತ ಕ್ರಮ: ಜಲಮಂಡಳಿ
ಬೆಂಗಳೂರು: ಅನಧಿಕೃತವಾಗಿ ಕಾವೇರಿ ನೀರಿನ ಸಂಪರ್ಕ ಪಡೆದಿರುವ ಪಿಜಿಗಳ ವಿರುದ್ದ ಕ್ರಮ ಕೈಗೊಂಡು ವಾರದೊಳಗೆ ವರದಿ ಸಲ್ಲಿಸುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶುಕ್ರವಾರ ಜಲಮಂಡಳಿ ಕಚೇರಿಯಲ್ಲಿ ಆಯೋಜಿಸಿದ್ದ ನೇರ ಫೋನ್ ಇನ್ ಕಾರ್ಯಕ್ರಮ ಭಾಗಿಯಾಗಿ ಮಾತನಾಡಿದ ಅವರು, ವಾಣಿಜ್ಯ ಉದ್ದೇಶದ ಸಂಪರ್ಕ ಪಡೆದುಕೊಂಡು ಪಿಜಿಗಳನ್ನು ನಡೆಸುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಅನಧಿಕೃತವಾಗಿ ನೀರಿನ ಮತ್ತು ಒಳಚರಂಡಿ ಸಂಪರ್ಕ ಪಡೆದುಕೊಳ್ಳುವುದು ಹಾಗೂ ಆ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವುದು ಸರಿಯಲ್ಲ. ಇದರಿಂದ ಜಲಮಂಡಳಿಗೆ ನಷ್ಟವಾಗುತ್ತದೆ ಎಂದರು.
ನೇರ ಫೋನ್ ಇನ್ ಕಾರ್ಯಕ್ರಮದ ಮೂಲಕ ದಾಖಲಾದ ದೂರಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಇದನ್ನು ಖಚಿತಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಗಳು ದೂರುಗಳನ್ನು ಲಿಖಿತ ರೂಪದಲ್ಲಿ ಸಂಬಂಧಪಟ್ಟ ಮುಖ್ಯ ಇಂಜಿನೀಯರ್ ಗಳಿಗೆ ಕಳುಹಿಸಿಕೊಡಬೇಕು. ಸಮಸ್ಯೆಗಳನ್ನು ಪರಿಹರಿಸಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮುಂದಿನ ವಾರದೊಳಗೆ ವರದಿಯನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪ್ರಧಾನ ಮುಖ್ಯ ಎಂಜಿನಿಯರ್ ಸುರೇಶ, ಮುಖ್ಯ ಎಂಜಿನಿಯರ್ ಎಲ್. ಕುಮಾರ ನಾಯಕ್, ಕೆ.ಎನ್.ಪರಮೇಶ, ಎಸ್.ವಿ.ವೆಂಕಟೇಶ, ಎ.ರಾಜಶೇಖರ್, ಮಹೇಶ ಕೆ.ಎನ್., ರಾಜೀವ್ ಕೆ.ಎನ್., ಗಂಗಾಧರ್ ಬಿ.ಸಿ., ದೇವರಾಜು ಎಂ., ಜಯಶಂಕರ್, ಅಪರ ಮುಖ್ಯ ಎಂಜಿನಿಯರ್ ಮಧುಸೂಧನ್ ಸೇರಿದಂತೆ ಇನ್ನೀತರ ಅಧಿಕಾರಿಗಳು ಇದ್ದರು.