ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ : ಆರ್.ಅಶೋಕ್

ಬೆಂಗಳೂರು : ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನ ಭಗವದ್ಗೀತೆ ಇದ್ದಂತೆ. ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಪಕ್ಷ ನಾಯಕಆರ್.ಅಶೋಕ್ ಹೇಳಿದ್ದಾರೆ.
ರವಿವಾರ ನಗರದ ಗಾಂಧಿಭವನದಲ್ಲಿ ಕರ್ನಾಟಕ ರಕ್ಷಣಾ ಸಮಿತಿಯ ವಾರ್ಷಿಕೋತ್ಸವ ಸಮಾರಂಭ ಹಾಗೂ ಕನ್ನಡ ಪರ ಹೋರಾಟಗಾರ ಡಾ.ಚಿ.ನಾ.ರಾಮು ಅಭಿನಂದನೆ ಮತ್ತು ವಿವಿಧ ಕ್ಷೇತ್ರದಲ್ಲಿನ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಕೇವಲ ಒಂದು ವರ್ಗಕ್ಕೆ ಸೀಮಿತವಾಗಿಲ್ಲ, ಅವರು ದೇಶದ ವಿಶ್ವಮಾನವ ಎಂದು ಬಣ್ಣಿಸಿದರು.
ಸಂವಿಧಾನ ಓದಿನಿಂದ ವಿದ್ಯಾವಂತರು, ಹೋರಾಟಗಾರರು, ಜನಪರ ಕಾಳಜಿ ಇರುವವರು ಸಮಾಜದಲ್ಲಿ ಆಗುತ್ತಿರುವ ತಪ್ಪುಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಸಾಮಾಜಿಕ ಜಾಲತಾಣ, ಮಾಧ್ಯಮಗಳು ಮತ್ತು ಜನಸಾಮಾನ್ಯರು ಹೆಚ್ಚು ಹೆಚ್ಚು ಬಲಿಷ್ಠರಾಗುತ್ತಿದ್ದಾರೆ. ಭಾರತದಲ್ಲಿ ತುಳಿತಕ್ಕೊಳಗಾದ ವರ್ಗದವರಿಗೆ ಮೀಸಲಾತಿ ನೀಡಬೇಕು ಎಂಬ ಅಂಬೇಡ್ಕರ್ ಚಿಂತನೆ ಈಗ ಬದಲಾಗಿದೆ. ಸಮಾಜದ ಪ್ರತಿಯೊಬ್ಬ ನಾಗರಿಕರು ಮೀಸಲಾತಿ ಕೇಳುತ್ತಿದ್ದಾರೆ. ಆದರೆ ಪ್ರತಿಯೊಬ್ಬರಿಗೂ ಮೀಸಲಾತಿ ನೀಡಿದರೆ ಅರ್ಥವಿಲ್ಲ ನುಡಿದರು.
ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿ, ಸಮಾಜದಲ್ಲಿ ಸೇವೆ ಮಾಡುವವರು ಸೇವೆ ಮಾಡುತ್ತಾರೆ, ಅಧಿಕಾರ ಚಲಾಯಿಸುವವರು ಕೇವಲ ಅಧಿಕಾರ ಚಲಾಯಿಸುತ್ತಾರೆ. ಹಣ, ಕೀರ್ತಿ, ಸೊಗಸಿನ ಅಧಿಕಾರದ ನಡುವೆ ಮನುಷ್ಯ ಸಿಲುಕದೆ ಸೇವೆ ಮಾಡುವಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಯುವ ಘಟಕದ ಅಧ್ಯಕ್ಷ ಜೆನ್ನಿಫರ್ ಅಯ್ಯಪ್ಪ, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಚ್.ರವೀಂದ್ರ, ಸಮಾಜ ಸೇವಕ ಅನಿಲ್ ಮೆಣಸಿನಕಾಯಿ, ಬಿಬಿಎಂಪಿ ಸದಸ್ಯ ಎ.ಎಲ್.ಶಿವಕುಮಾರ್, ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಪುರಸ್ಕೃತರಿಗೆ ಸನ್ಮಾನ: ಸಮಾಜ ಸೇವಾರತ್ನ ಪಡೆದ ಲಹರಿ ರೆಕಾರ್ಡಿಂಗ್ ಕಂಪೆನಿ ನಿರ್ದೇಶಕ ತುಳಸಿ ರಾಮ್ ನಾಯ್ಡು, ವಿದ್ಯಾರಣ್ಯಪುರ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಆರ್.ಅಶ್ವಥ್, ದಂಡು ಪ್ರದೇಶ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಸಿ.ಜಗನ್ನಾಥರೆಡ್ಡಿ, ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಟಿ.ವೆಂಕಟೇಶ್ ಗೌಡ, ವಕೀಲ ಡಾ.ಸಿ.ಕೆ.ಮೌಲಾ ಷರೀಫ್, ಜಿ.ಕೆ.ಅಸೋಸಿಯೇಟ್ಸ್‍ನ ಸಂಸ್ಥಾಪಕ ಜಿ.ಕರ್ಣ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
………………………