ʼಕೆಪಿಎಸ್‍ಸಿ ಪರೀಕ್ಷೆʼ ಗ್ರಾಮೀಣ ಭಾಗದ ಅಭ್ಯರ್ಥಿಗಳು ಆಯ್ಕೆಯಾಗದಂತೆ ಷಡ್ಯಂತ್ರ : ಆರ್.ಅಶೋಕ್
‘ಕೆಪಿಎಸ್‍ಸಿ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಪದೇ ಪದೇ ಅವಾಂತರ’

ಬೆಂಗಳೂರು : ರಾಜ್ಯ ಲೋಕಸೇವಾ ಆಯೋಗ(ಕೆಪಿಎಸ್‍ಸಿ)ವು ಇತ್ತೀಚೆಗೆ 384 ಗ್ರೂಪ್ ಎ ಮತ್ತು ಬಿ ಹುದ್ದೆಗಳಿಗೆ(ಕೆಎಎಸ್) ನಡೆಸಿರುವ ಪೂರ್ವಭಾವಿ ಪರೀಕ್ಷೆಯಲ್ಲಿ ಎರಡೆರಡು ಬಾರಿ ಕನ್ನಡ ಭಾಷಾ ಪ್ರಶ್ನೆ ಪತ್ರಿಕೆಯಲ್ಲಿ ಲೋಪಗಳನ್ನು ಎಸಲಾಗಿದೆ. ಆ ಮೂಲಕ ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಭಾಗದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆಯ್ಕೆಯಾಗದಂತೆ ಷಡ್ಯಂತ್ರ ನಡೆಸಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.
ಮಂಗಳವಾರ ವಿಧಾನಸಭೆಯಲ್ಲಿ ನಿಲುವಳಿ ಸೂಚನೆಯಡಿ ಕೆಪಿಎಸ್‍ಸಿ ಪರೀಕ್ಷಾ ಅಕ್ರಮದ ವಿಚಾರವಾಗಿ ಚರ್ಚಿಸಲು ಅವರು ಸ್ಪೀಕರ್ ಬಳಿ ಅವಕಾಶ ಕೋರಿದರು. ಆದರೆ, ಭೋಜನ ವಿರಾಮದ ಬಳಿಕ ನಿಲುವಳಿ ಸೂಚನೆಯನ್ನು ನಿಯಮ 69ಕ್ಕೆ ಪರಿವರ್ತಿಸಿ ಸ್ಪೀಕರ್ ಚರ್ಚೆಗೆ ಅವಕಾಶ ಕಲ್ಪಿಸಿದರು.
ಕನ್ನಡ ಪ್ರಶ್ನೆ ಪತ್ರಿಕೆಯನ್ನು ಮೊದಲು ಸಿದ್ಧಪಡಿಸಿಕೊಂಡು ಆನಂತರ ಬೇರೆ ಭಾಷೆಗೆ ಭಾಷಾಂತರ ಮಾಡಬೇಕು ಎಂದು ಕನ್ನಡ ಕಾವಲು ಸಮಿತಿಯು ಈ ಹಿಂದೆಯೇ ಆದೇಶ ಹೊರಡಿಸಿದೆ. ಆದರೆ, ಕೆಪಿಎಸ್‍ಸಿ ಅದಕ್ಕೆ ಮಾನ್ಯತೆ ನೀಡದೆ ಇಂಗ್ಲಿಷ್ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿ, ಅದನ್ನು ಗೂಗಲ್ ಮೂಲಕ ಕನ್ನಡ ಭಾಷೆಗೆ ಭಾಷಾಂತರ ಮಾಡಿದ್ದೆ ಇಷ್ಟೆಲ್ಲ ಅವಾಂತರಗಳಿಗೆ ಕಾರಣ ಎಂದು ಅಶೋಕ್ ದೂರಿದರು.
ಮೊದಲ ಬಾರಿ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ 59 ತಪ್ಪುಗಳಾಗಿತ್ತು. ಇದನ್ನು ಅಭ್ಯರ್ಥಿಗಳು ಗಮನಿಸಿ ಪ್ರತಿಭಟನೆಗಳನ್ನು ನಡೆಸಿದ್ದರು. ಬಳಿಕ ಸ್ವತಃ ಮುಖ್ಯಮಂತ್ರಿ ಈ ಬಗ್ಗೆ ಗಮನ ಹರಿಸಿ ಮುಂದೆ ಈ ರೀತಿಯ ಪ್ರಮಾದಗಳು ಆಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಟ್ವೀಟ್ ಮಾಡಿದರು. ಅದೇ ಮತ್ತೊಂದೆಡೆ ಕೆಪಿಎಸ್‍ಸಿಯ ಮುಖ್ಯ ಪರೀಕ್ಷಾ ಅಧಿಕಾರಿ ಟೀಕೆಗಳನ್ನು ನಾನು ಸಂಭ್ರಮಿಸುತ್ತಿದ್ದೇನೆ ಎಂದು ಟ್ವೀಟ್ ಮಾಡುತ್ತಾರೆ. ಇಂತಹವರಿಂದ ಕನ್ನಡದ ಮಕ್ಕಳಿಗೆ ನ್ಯಾಯ ಸಿಗಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು.
ಹುದ್ದೆಗಳಿಗೆ ದರ ನಿಗದಿ: ಮುಖ್ಯಮಂತ್ರಿ ಸೂಚನೆ ಬಳಿಕ ಮರು ಪರೀಕ್ಷೆ ನಡೆಸಿದಾಗ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ 79 ತಪ್ಪುಗಳು ಇದ್ದವು. ಕೆಪಿಎಸ್‍ಸಿಯವರಿಗೆ ಇಂಗ್ಲಿಷ್‍ನಿಂದ ಕನ್ನಡಕ್ಕೆ ಪ್ರಶ್ನೆ ಪತ್ರಿಕೆ ಭಾಷಾಂತರ ಮಾಡಿಕೊಡುವವರು ಯಾರು ಸಿಗಲಿಲ್ಲವೇ? ಕೆಪಿಎಸ್‍ಸಿಯಲ್ಲಿ ಕಳ್ಳರು ತುಂಬಿಕೊಂಡಿದ್ದಾರೆ. ಭ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಪೂರ್ವಭಾವಿ ಪರೀಕ್ಷೆಗೆ 1.50 ಕೋಟಿ ರೂ., ಮುಖ್ಯ ಪರೀಕ್ಷೆಗೆ 1 ಕೋಟಿ ರೂ. ಹಾಗೂ ಸಂದರ್ಶನಕ್ಕೆ 40 ಲಕ್ಷ ರೂ. ನಿಗದಿ ಮಾಡಿಕೊಂಡಿದ್ದಾರೆ ಎಂದು ಅವರು ದೂರಿದರು.
ಅದೇ ರೀತಿ ಪ್ರತಿಯೊಂದು ಹುದ್ದೆಗೂ ದರ ನಿಗದಿ ಮಾಡಿಕೊಂಡಿದ್ದಾರೆ. ಸಹಾಯಕ ಆಯುಕ್ತ ಹುದ್ದೆಗೆ 2 ಕೋಟಿ ರೂ., ಡಿವೈಎಸ್ಪಿಗೆ 2 ಕೋಟಿ ರೂ., ವಾಣಿಜ್ಯ ತೆರಿಗೆ ಇಲಾಖೆಯ ಹುದ್ದೆಗೆ 1.50 ಕೋಟಿ ರೂ., ತಹಶೀಲ್ದಾರ್ ಹುದ್ದೆಗೆ 1 ಕೋಟಿ ರೂ. ದರ ನಿಗದಿ ಮಾಡಿದ್ದಾರೆ ಎಂದು ಅಶೋಕ್ ಆರೋಪಿಸಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ಯಾವುದಾದರೂ ನಿರ್ದಿಷ್ಟ ಪ್ರಕರಣ ಇದ್ದರೆ ತಿಳಿಸಿ. ಕೆಪಿಎಸ್‍ಸಿ ಒಂದು ಸಾಂವಿಧಾನಿಕ ಸಂಸ್ಥೆ ಅದರ ವಿಶ್ವಾಸಾರ್ಹತೆಗೆ ಧಕ್ಕೆ ತರುವುದು ಬೇಡ ಎಂದರು. ಇದೇ ಮಾತಿಗೆ ಆಡಳಿತ ಪಕ್ಷದ ಕೆ.ಎಂ.ಶಿವಲಿಂಗೇಗೌಡ, ಷಡಕ್ಷರಿ ಸೇರಿದಂತೆ ಇನ್ನಿತರರು ದನಿ ಗೂಡಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ, ಸಾಂವಿಧಾನಿಕ ಸಂಸ್ಥೆಗಳು ದೇವಾಲಯಗಳು ಅಲ್ಲ. ಅಲ್ಲಿ ಏನು ನಡೆಯುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಹೈಕೋರ್ಟ್ ಬಗ್ಗೆಯೇ ಇಲ್ಲಿ ಚರ್ಚೆಗಳು ನಡೆದಿವೆ ಎಂದು ಹೇಳಿದರು.
2.30 ಲಕ್ಷ ಅಭ್ಯರ್ಥಿಗಳು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಕೆಪಿಎಸ್‍ಸಿಯಲ್ಲಿ ಹುದ್ದೆಗಳನ್ನು ಹರಾಜಿಗಿಟ್ಟಿದ್ದಾರೆ. ಮೆರಿಟ್ ಆಧಾರದಲ್ಲಿ ಆಯ್ಕೆಯಾಗಬಯಸುವವರ ಗತಿ ಏನು? ಕನ್ನಡಕ್ಕೆ ಅವಮಾನ ಮಾಡುತ್ತಿರುವ ಕೆಪಿಎಸ್‍ಸಿ ಅಧಿಕಾರಿಗಳನ್ನು ಯಾಕೆ ಇಟ್ಟುಕೊಂಡಿದ್ದೀರಾ? ಅವರ ವಿರುದ್ಧ ಕ್ರಮ ಕೈಗೊಳ್ಳಿ. ಕೆಪಿಎಸ್‍ಸಿ ಪರೀಕ್ಷೆಯಲ್ಲಿ ಅಕ್ರಮಗಳು ನಡೆಯುತ್ತಿರುವ ಕುರಿತು ಉಪ್ಪಾರ ಪೇಟೆ ಹಾಗೂ ವಿಜಯನಗರ ಪೊಲೀಸ್ ಠಾಣೆಗಳಲ್ಲಿ ಎಫ್‍ಐಆರ್‍ಗಳು ದಾಖಲಾಗಿವೆ ಎಂದು ಅಶೋಕ್ ಹೇಳಿದರು.
ಕೆಪಿಎಸ್‍ಸಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಅಲ್ಲಿನ ಸದಸ್ಯ ವಿಜಯಕುಮಾರ್ ನೇತೃತ್ವದ ಐವರು ಸದಸ್ಯರ ಉಪ ಸಮಿತಿಯು ಪರಿಶೀಲನೆ ಮಾಡಿ 500 ಪುಟುಗಳ ವರದಿಯನ್ನು ಸಲ್ಲಿಕೆ ಮಾಡಿದೆ. ಆದುದರಿಂದ, ಸರಕಾರ ಗ್ರೂಪ್ ಎ ಮತ್ತು ಬಿ ಹುದ್ದೆಗಳಿಗೆ ನಡೆಸಿರುವ ಪೂರ್ವ ಭಾವಿ ಮರು ಪರೀಕ್ಷೆಯನ್ನು ರದ್ದುಗೊಳಿಸಬೇಕು. ಹಳೆ ಅಧಿಸೂಚನೆ ಹಿಂದಕ್ಕೆ ಪಡೆದು ಹೊಸದಾಗಿ ಅಧಿಸೂಚನೆ ಹೊರಡಿಸಬೇಕು ಎಂದು ಅವರು ಆಗ್ರಹಿಸಿದರು.
ವಯಸ್ಸಿನ ಮಿತಿ ನಿರ್ಬಂಧ ಸಡಿಲಿಸಿ ಅರ್ಜಿ ಸಲ್ಲಿಸಿದ್ದ ಎಲ್ಲ 2.30 ಲಕ್ಷ ಅಭ್ಯರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಗೂಗಲ್ ಭಾಷಾಂತರದ ಮೂಲಕ ಕನ್ನಡಕ್ಕೆ ಅಪಮಾನ ಮಾಡಿರುವ ಅಧಿಕಾರಿಗೆ ಭಾಷಾ ನೀತಿ ಅವಹೇಳನ ಮಾಡಿದ ಆರೋಪದ ಮೇರೆಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಅಶೋಕ್ ಒತ್ತಾಯಿಸಿದರು.
ಬೇಜವಾಬ್ದಾರಿ ಮತ್ತು ಹೊಣೆಗಾರಿಕೆ ಮರೆತು ಕಾರ್ಯ ನಿರ್ವಹಿಸಿರುವ ಅಧಿಕಾರಿಗಳನ್ನು ತಕ್ಷಣ ಅಮಾನತ್ತುಗೊಳಿಸಿ ಅವರ ವಿರುದ್ಧ ವಿಚಾರಣೆಗೆ ಆದೇಶಿಸಬೇಕು. ಮರು ಪರೀಕ್ಷೆಗಳಿಂದ ಆಗಿರುವ 25 ಕೋಟಿ ರೂ.ಗಳಿಗೂ ಅಧಿಕ ಹಣದ ನಷ್ಟವನ್ನು ತಪ್ಪಿತಸ್ಥರಿಂದಲೇ ವಸೂಲು ಮಾಡಬೇಕು. ಪದೇ ಪದೇ ಪ್ರಶ್ನೆ ಪತ್ರಿಕೆ ಗೊಂದಲ ಆಗದಂತೆ ಎಚ್ಚರವಹಿಸಲು ಯುಪಿಎಸ್‍ಸಿ ಮಾದರಿ ಅಳವಡಿಸಿಕೊಳ್ಳಲು ಸೂಚನೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಜೊತೆಗೆ ವಾಣಿಜ್ಯ ತೆರಿಗೆ ಇಲಾಖೆಯ ನಿರೀಕ್ಷಕ ಮತ್ತು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆಗಳಲ್ಲೂ ನಡೆದಿರುವ ಅಕ್ರಮಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಅಶೋಕ್ ಒತ್ತಾಯಿಸಿದರು.
ಚರ್ಚೆಯಲ್ಲಿ ಬಿಜೆಪಿ ಸದಸ್ಯರಾದ ಸುರೇಶ್ ಗೌಡ, ಬಸನಗೌಡ ಪಾಟೀಲ್ ಯತ್ನಾಳ್, ಜೆಡಿಎಸ್ ಸದಸ್ಯ ಸಿ.ಎನ್.ಬಾಲಕೃಷ್ಣ ಸೇರಿದಂತೆ ಇನ್ನಿತರರು ಮಾತನಾಡಿದರು.