3 ತಿಂಗಳೊಳಗೆ ಆಸ್ತಿಗಳಿಗೆ ಇ-ಖಾತಾ ನೀಡಲು ಯೋಜನೆ : ರಹೀಂ ಖಾನ್

ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಾಕಿ ಇರುವ ಎಲ್ಲ ಆಸ್ತಿಗಳಿಗೆ ಅಭಿಯಾನ ಕೈಗೊಂಡು 3 ತಿಂಗಳೊಳಗಾಗಿ ಇ-ಖಾತಾ ನೀಡಲು ಯೋಜಿಸಲಾಗಿದೆ ಎಂದು ಪೌರಾಡಳಿತ ಇಲಾಖೆ ಸಚಿವ ರಹೀಂ ಖಾನ್ ತಿಳಿಸಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಇ-ಖಾತಾ ಅಭಿಯಾನದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಮೇ 10ರೊಳಗಾಗಿ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯ ಆಸ್ತಿಗಳಿಗೆ ಇ-ಖಾತಾ ನೀಡಲು ಅಭಿಯಾನ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ನೀಡಲು ಅಧಿಕಾರಿಗಳು ಬಾಕಿಯಿರುವ ಆಸ್ತಿಗಳನ್ನು ಗುರುತಿಸಬೇಕು. ಹೀಗೆ ಗುರುತಿಸಲಾದ ಆಸ್ತಿಗಳ ಮಾಲಕರು ಇ-ಖಾತಾ ಪಡೆಯಲು ಬೇಕಾದ ದಾಖಲೆಗಳನ್ನು ಸಲ್ಲಿಸಲು ಮಾಹಿತಿ ನೀಡಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ಪಡೆಯಲು ಮಾಹಿತಿ ನೀಡುವ ಸಲುವಾಗಿ ಸಹಾಯವಾಣಿ ಸ್ಥಾಪಿಸಬೇಕು. ಸಹಾಯವಾಣಿಯಲ್ಲಿ ಇ-ಖಾತಾ ಸಂಬಂಧಿಸಿದ ವಿಷಯದ ಕುರಿತು ಪರಿಪೂರ್ಣ ಮಾಹಿತಿ ಇರುವ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ಅಧಿಕಾರಿಗಳಿಗೆ ರಹೀಂಖಾನ್ ಸೂಚಿಸಿದರು.
ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಪ್ರಕರಣ 94 ಮತ್ತು ಕರ್ನಾಟಕ ಪೌರನಿಗಮಗಳ ಅಧಿನಿಯಮ 1976 ಪ್ರಕರಣ 110 ವಿನಾಯಿತಿಗೊಳಪಟ್ಟ ಆಸ್ತಿಗಳನ್ನು ಹೊರತುಪಡಿಸಿ ಉಳಿದಂತ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು. ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಪ್ರಕರಣ 106 ಮತ್ತು ಕರ್ನಾಟಕ ಪೌರನಿಗಮಗಳ ಅಧಿನಿಯಮ 1976 ಪ್ರಕರಣ 112 (ಬಿ) ಗೆ 10-09-2024ರಲ್ಲಿ ತಿದ್ದುಪಡಿ ತರಲಾಗಿದ್ದು, ಈ ತಿದ್ದುಪಡಿಯ ಪೂರ್ವದಲ್ಲಿ ಸೃಜಿಸಲಾದ ಅನಧಿಕೃತ ಆಸ್ತಿಗಳನ್ನು ಬಿ-ಖಾತೆಯಲ್ಲಿ ದಾಖಲಿಸಬೇಕು ಎಂದು ರಹೀಂಖಾನ್ ತಿಳಿಸಿದರು.
ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಸಿಎಂ ಸಿದ್ದರಾಮಯ್ಯ ಅವರು ಬಿ-ಖಾತಾ ಯೋಜನೆಯನ್ನು ಪ್ರಾರಂಭಿಸಲು ತಿಳಿಸಿದ್ದು, ಇದರಿಂದ ಬಡವರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ರಹೀಂಖಾನ್ ಹೇಳಿದರು.