ಫೆಂಗಲ್ ಚಂಡಮಾರುತ ಪರಿಣಾಮ | ಬೆಂಗಳೂರಿನಲ್ಲಿ ನಿಲ್ಲದ ಮಳೆ, ಹಳೇ ಮನೆ ಕುಸಿತ
ಬೆಂಗಳೂರು: ಫೆಂಗಲ್ ಚಂಡಮಾರುತ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನೊಂದೆಡೆ, ಹಳೇಯ ಮನೆವೊಂದು ನೆಲಕ್ಕೆ ಉರುಳಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.
70 ವರ್ಷದ ಹಳೆಯ ಮನೆ ಸೋಮವಾರ ಏಕಾಏಕಿ ಕುಸಿದಿರುವ ಘಟನೆ ಇಲ್ಲಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಜೆ ನಗರದಲ್ಲಿ ಜರುಗಿದೆ. ವೃದ್ಧ ದಂಪತಿಗಳು ವಾಸವಾಗಿದ್ದ ಹಳೆ ಮನೆ ಇದಾಗಿದ್ದು, ಸದ್ಯ ಈ ಘಟನೆಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. ಸ್ಥಳಕ್ಕೆ ಪೊಲೀಸರು, ಪಾಲಿಕೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು.
ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಹಾಗೂ ಆಗಾಗ ಮಳೆಯಾಗಿದ್ದರಿಂದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕನಿಷ್ಠ ಮತ್ತು ಗರಿಷ್ಠ ತಾಪಮಾನದಲ್ಲಿ ಕುಸಿತವಾಗಿ ಚಳಿ ಕೂಡ ಹೆಚ್ಚಾಗಿತ್ತು.
ಇಲ್ಲಿನ ಕೆ.ಆರ್. ಮಾರುಕಟ್ಟೆ, ಚಿಕ್ಕಪೇಟೆ, ಸುಲ್ತಾನ್ ಪೇಟೆ, ಬಳೆಪೇಟೆ, ಕಾಟನ್‍ಪೇಟೆ, ವಿಜಯನಗರ, ಕಾಮಾಕ್ಷಿಪಾಳ್ಯ, ಮೆಜೆಸ್ಟಿಕ್, ಮೈಸೂರು ರಸ್ತೆ, ಬಸವನಗುಡಿ, ಜೆ.ಪಿ. ನಗರ, ಮಲ್ಲೇಶ್ವರ, ಜೆ.ಸಿ. ರಸ್ತೆ, ವಿಶ್ವೇಶ್ವರಯ್ಯಪುರ, ವಿದ್ಯಾಪೀಠ, ಹಗದೂರು.
ಯಲಹಂಕ, ಆರ್.ಆರ್.ನಗರ, ವಿ.ನಾಗೇನಹಳ್ಳಿ, ಪುಲಿಕೇಶಿನಗರ, ಅರಕೆರೆ, ಎಚ್‍ಎಸ್‍ಆರ್ ಲೇಔಟ್, ನಾಗಪುರ, ಕಾಟನ್‍ಪೇಟೆ, ಚಾಮರಾಜಪೇಟೆ, ಬಿಟಿಎಂ ಲೇಔಟ್, ಹೂಡಿ ಸೇರಿದಂತೆ ನಗರ ವಿವಿಧೆಡೆ ಜಿಟಿಜಿಟಿ ಮಳೆಯ ಮುಂದುವರೆದಿದೆ.
ಇತ್ತ ಸಿಲ್ಕ್ ಬೋರ್ಡ್ ಜಂಕ್ಷನ್, ಕೆಲ ಕೆಳ ಸೇತುವೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರೆ, ಹೆಬ್ಬಾಳ ಮೇಲ್ಸುತುವೆ, ಎಸ್ಟೀಂ ಮಾಲ್‍ನಿಂದ ಮೇಕ್ರಿ ವೃತ್ತದ ಕಡೆಗೆ ಒಳ ಬರುವ ವಾಹನಗಳು ನಿಧಾನಗತಿಯಲ್ಲಿ ಸಾಗಿದವು.
ಒಟ್ಟಿನಲ್ಲಿ ವಾರದ ಮೊದಲನೇ ದಿನ ಸೋಮವಾರ ಮಳೆ ನಿರಂತರವಾಗಿ ಸುರಿದಿದ್ದರಿಂದ, ಶಾಲಾ–ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಪರದಾಡಿದರು. ಕಚೇರಿ ಹಾಗೂ ಇತರೆ ಕಾರ್ಯಗಳಿಗೆ ಹೊರಟಿದ್ದ ನಾಗರಿಕರು ಮಳೆಯಲ್ಲೇ ಸಂಚರಿಸಬೇಕಾಯಿತು.
ಪ್ರಯಾಣಿಕರ ಬಳಿ ಸುಲಿಗೆ:
ನಗರದಲ್ಲಿ ದಿನವಿಡೀ ಸುರಿದ ಮಳೆಯಿಂದ, ಆಟೊ ಹಾಗೂ ಟ್ಯಾಕ್ಸಿ ಪ್ರಯಾಣ ದರ ದಿಢೀರನೇ ದುಪ್ಪಟ್ಟಿಗಿಂತ ಹೆಚ್ಚಾಯಿತು. 100 ದರಕ್ಕೆ 400ರವರೆಗೂ ಆಟೊ ಮತ್ತು ಟ್ಯಾಕ್ಸಿ ಚಾಲಕರು ಬೇಡಿಕೆ ಇರಿಸಿದರು.
ಮಳೆ ಸುರಿಯುತ್ತಿದ್ದುದರಿಂದ ಅನ್ಯ ಮಾರ್ಗವಿಲ್ಲದೆ ಪ್ರಯಾಣಿಕರು ಹೆಚ್ಚಿನ ಮೊತ್ತ ನೀಡಿ ಪ್ರಯಾಣಿಸಿದರು. ಕೆಲವು ಸಂದರ್ಭದಲ್ಲಿ ಬುಕ್ ಮಾಡಿದ ದರಕ್ಕಿಂತ ಹೆಚ್ಚು ಮೊತ್ತವನ್ನೂ ನೀಡಬೇಕಾಯಿತು ಎಂದು ನಾಗರಿಕರು ದೂರಿದರು.
ರಜೆ ಇಲ್ಲ :
‘ಬೆಂಗಳೂರು ನಗರ ಜಿಲ್ಲೆಯಲ್ಲಿ ‘ಯೆಲ್ಲೋ ಅಲರ್ಟ್’ ಇರುವುದರಿಂದ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ’ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.