ವಾಲ್ಮೀಕಿ ನಿಗಮದಲ್ಲಿ ಅಕ್ರಮ | ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹ : ರಾಜ್ಯಪಾಲರಿಗೆ ಬಿಜೆಪಿ ದೂರು
ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಅಕ್ರಮ ವರ್ಗಾವಣೆ ಮಾಡಿದ ಆರೋಪ ಪ್ರಕರಣ ಸಂಬಂಧ ಸಚಿವ ನಾಗೇಂದ್ರ ರಾಜೀನಾಮೆ ಮತ್ತು ಪ್ರಕರಣ ಸಿಬಿಐ ತನಿಖೆಗೆ ಆಗ್ರಹಿಸಿ ಪ್ರತಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಶಾಸಕರು, ಪರಿಷತ್ ಸದಸ್ಯರು ವಿಧಾನಸೌಧದಿಂದ ರಾಜಭವನದ ವರೆಗೆ ಕಾಲ್ನಾಡಿಗೆ ಜಾಥಾ ನಡೆಸಿ, ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.
ಗುರುವಾರ ಬೆಳಗ್ಗೆ ವಿಧಾನಸೌಧದಿಂದ ಕಾಲ್ನಾಡಿಗೆ ಆರಂಭಿಸಿದ ಬಿಜೆಪಿ ಮುಖಂಡರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರಕ್ಕೆ ಧಿಕ್ಕಾರ, ಭ್ರಷ್ಟ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ, ಸಚಿವ ನಾಗೇಂದ್ರ ಕೂಡಲೇ ರಾಜೀನಾಮೆ ನೀಡಬೇಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ.ದುರುಪಯೋಗದ ಹಗರಣಕ್ಕೆ ಸಂಬಂಧಿಸಿ ನಾಗೇಂದ್ರ ಅವರ ರಾಜೀನಾಮೆ ಕೊಡಲೇಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ‘ದಲಿತ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ತೆಲಂಗಾಣಕ್ಕೆ ವರ್ಗಾಯಿಸಿದ್ದು, ಪರಿಶಿಷ್ಟ ಸಮುದಾಯಕ್ಕೆ ಸೇರಿದ ಹಣವನ್ನು ಅಕ್ರಮವಾಗಿ ಲೋಕಸಭಾ ಚುನಾವಣೆಗೆ ಬಳಸಿದ್ದಾರೆ. ಸಚಿವರ ರಾಜೀನಾಮೆ ಪಡೆಯಲು ಸಿಎಂಗೆ ಭಯ ಇದ್ದಂತಿದೆ. ಈ ಪ್ರಕರಣವನ್ನು ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು’ ಎಂದು ಆಗ್ರಹಿಸಿದರು.