ಜಾತಿಗಣತಿಗೆ ಅವಕಾಶ ನೀಡಿದ್ದೆ ಕಾಂಗ್ರೆಸ್ ಸರಕಾರ : ಸಚಿವ ರಾಮಲಿಂಗಾರೆಡ್ಡಿ

ರಾಮಲಿಂಗಾರೆಡ್ಡಿ
ಬೆಂಗಳೂರು : ಜಾತಿಗಣತಿಗೆ ಅವಕಾಶ ನೀಡಿದ್ದೆ ಕಾಂಗ್ರೆಸ್ ಸರಕಾರ. ಅಧಿಕಾರವಿದ್ದಾಗ ಬಿಜೆಪಿ ಹಾಗೂ ಜೆಡಿಎಸ್ನವರು ಈ ವರದಿ ಜಾರಿಗೆ ಮನಸ್ಸೇ ಮಾಡಲಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2015ರಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ಜಾತಿಗಣತಿ ವರದಿ ಮಾಡಲಾಗಿತ್ತು, ಜಾತಿಗಣತಿಗೆ ಅವಕಾಶ ನೀಡಿದ್ದೆ ನಮ್ಮ ಸರಕಾರ. ಈ ಅವಧಿಯಲ್ಲಿ ಜಾತಿಗಣತಿ ಜಾರಿಗೆ ತರುವ ಕೆಲಸ ಮಾಡುತ್ತೇವೆ ಎಂದರು.
ಜಾತಿಗಣತಿ ವರದಿಯನ್ನು ನೋಡದೇ ಮಾಧ್ಯಮಗಳಲ್ಲಿ ಯಾರೂ ಬೇಕಾಬಿಟ್ಟಿ ಪ್ರತಿಕ್ರಿಯೆ ನೀಡಬಾರದು. ಈ ವರದಿಯಲ್ಲಿರುವ ಸತ್ಯಾಸತ್ಯತೆ ತಿಳಿಯದೆ ವಿಪಕ್ಷಗಳು ಟೀಕಿಸುವುದು ಸರಿಯಲ್ಲ. ಒಮ್ಮೆ ವರದಿ ಮಂಡನೆಯಾದ ಮೇಲೆ ಲೋಪದೋಷಗಳಿವೆ, ಸರಿಪಡಿಸಿ ಎಂದೂ ಹೇಳಬಹುದು. ಅದಕ್ಕೂ ಅವಕಾಶ ಇದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಇದೇ ವೇಳೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಜಾತಿ ಜನಗಣತಿ ವರದಿಯಲ್ಲಿ ಏನಿದೆ ಎಂದು ಯಾರಿಗೂ ಗೊತ್ತಿಲ್ಲ. ದತ್ತಾಂಶ, ಅಂಕಿ-ಅಂಶಗಳಿಗೆ ಹೋಲಿಕೆ ಆಗಬೇಕು. ಸರಕಾರದ ಇಲಾಖೆಗಳಲ್ಲೂ ಅಂಕಿ ಅಂಶಗಳಿರುತ್ತವೆ ಎಂದರು.