‘ಅನುದಾನ ಹಂಚಿಕೆ’ ಬಿಜೆಪಿಯಿಂದ ಅಪಪ್ರಚಾರ: ರಾಮಲಿಂಗಾರೆಡ್ಡಿ

ಬೆಂಗಳೂರು : ಬಿಜೆಪಿ ಸರಕಾರ ಅವಧಿಯಲ್ಲಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಲ್ಲಿ ಭಾರೀ ತಾರತಮ್ಯ ಮಾಡಲಾಗಿತ್ತು. ಇದೀಗ ಅದನ್ನು ಮರೆಮಾಚಿ ಸರಕಾರದ ಕುರಿತು ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2018ನೇ ಸಾಲಿನಲ್ಲಿ ಸಿದ್ದರಾಮಯ್ಯ ಅವರ ನಿರ್ಗಮಿತ ಸರಕಾರ ಬಜೆಟ್ ನಲ್ಲಿ ಬಿಬಿಎಂಪಿಗೆ 7 ಸಾವಿರ ಕೋಟಿ ನಿಗದಿ ಮಾಡಿತ್ತು. ಅನಂತರ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರಕಾರದಲ್ಲಿ ಇನ್ನೂ 1 ಸಾವಿರ ಕೋಟಿ ರೂ. ಒದಗಿಸಲಾಯಿತು. ತದನಂತರ ಆಪರೇಷನ್ ಕಮಲದ ಮೂಲಕ ಬಿಜೆಪಿ ಸರಕಾರ ಬಂದಾಗ ಕಾಂಗ್ರೆಸ್ ಶಾಸಕರಿಗೆ ನೀಡಿದ್ದ ಅನುದಾನದಲ್ಲಿ ಶೇ.50ರಷ್ಟು ಕಡಿತ ಮಾಡಲಾಗಿತ್ತು. ತಮ್ಮ ಕ್ಷೇತ್ರಕ್ಕೆ 387 ಕೋಟಿ ರೂ. ಬದಲಾಗಿ 152 ಕೋಟಿ ರೂ. ಮಾತ್ರ ನೀಡಲಾಗಿತ್ತು ಎಂದು ವಿವರಿಸಿದರು.
ಯಡಿಯೂರಪ್ಪ ಸರಕಾರ ಬಿಬಿಎಂಪಿ ಅಭಿವೃದ್ಧಿಗೆ 8 ಸಾವಿರ ಕೋಟಿ ರೂ. ನೀಡಿದೆ ಎಂದು ಪದೇಪದೇ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಇದು ಆಧಾರರಹಿತ ಎಂದ ಅವರು, ಬಿಜೆಪಿ ಕಾಲದಲ್ಲಿ ಆಸ್ತಿಗಳನ್ನು ಅಡಮಾನ ಇಡಲಾಗಿತ್ತು. ಕಸದ ನಗರ ಎಂಬ ಅಪಕೀರ್ತಿ ಬಂದಿತ್ತು. ನಮ್ಮ ಸರಕಾರ ಹೊರವರ್ತುಲ ರಸ್ತೆ, ವೈಟ್ ಟಾಪಿಂಗ್, ಮೇಲೇತುವೆ, ಕೆಳ ಸೇತುವೆ ಸೇರಿದಂತೆ ಹಲವಾರು ಕಾಮಗಾರಿಗಳನ್ನು ಕೈಗೊಂಡಿದೆ ಎಂದು ಹೇಳಿದರು.
ಅವರ ಕಾಲದಲ್ಲಿ 1 ಕಿ.ಮೀ. ನಷ್ಟೂ ಮಳೆಗಾಲುವೆ ಪುನರುಜ್ಜಿವನ ಮಾಡಿಲ್ಲ, ಟೆಂಡರ್ ಶೂರ್ ಕಾಮಗಾರಿ ಮೂಲೆಗುಂಪಾಗಿದ್ದವು. ರಸ್ತೆ ಗುಂಡಿಗಳನ್ನು ಮುಚ್ಚಲು ಹೈಕೋರ್ಟ್ ನಿಗಾ ವಹಿಸಬೇಕಾಯಿತು. ಅಷ್ಟು ದುರಾಡಳಿತ ಬೆಂಗಳೂರಿನಲ್ಲಿತ್ತು. ಪ್ರತಿ ತಿಂಗಳು ಬಿಬಿಎಂಪಿ ಆಯುಕ್ತರು ಕೋಟ್ರ್ನಲ್ಲಿ ನಿಲ್ಲಬೇಕಿತ್ತು. ಅಷ್ಟು ಖರ್ಚು ಮಾಡಿದ್ದರೆ ಸಮಸ್ಯೆಗಳೇ ಇರುವಂತಿರಲಿಲ್ಲವಲ್ಲ.ಅದರಲ್ಲೂ, ಪಶ್ಚಿಮ ಬೆಂಗಳೂರು ಮಳೆಯಿಂದ ಮುಚ್ಚಿ ಹೋಗಿತ್ತು. ಆಗ ಸರಕಾರ ಕ್ರಮವನ್ನೇ ತೆಗೆದುಕೊಳ್ಳಲಿಲ್ಲ. ಈಗ ಅನುದಾನದ ತಾರತಮ್ಯ ಎಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾರೆ. ಇದೆಲ್ಲಾ ಆಧಾರರಹಿತ ಎಂದರು.
ಮೇ ನಲ್ಲಿಯೇ ಚುನಾವಣೆ: ‘ಗ್ರೇಟರ್ ಬೆಂಗಳೂರಿಗೆ ಶಾಸಕ ರಿಝ್ವಾನ್ ಅರ್ಶದ್ ಅವರ ಅಧ್ಯಕ್ಷತೆಯ ಸಂಸದೀಯ ಸಮಿತಿ ವರದಿ ನೀಡಿದೆ. ಅದರ ಆಧಾರವಾಗಿ ವಿಧಾನಮಂಡಲದಲ್ಲಿ ಮಸೂದೆ ಮಂಡಿಸಲಾಗುವುದು. ಅಂಗೀಕಾರಗೊಂಡ ಬಳಿಕ ರಾಜ್ಯಪಾಲರು ಅನುಮೋದನೆ ನೀಡಬೇಕಿದೆ. ನಂತರ ಅದರ ಆಧಾರದ ಮೇಲೆ ಮೇ ತಿಂಗಳಿನಲ್ಲಿ ಚುನಾವಣೆ ನಡೆಯಬಹುದು ಎಂದು ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.