ದೇವಾಲಯದ ಅರ್ಚಕ, ನೌಕರರ ವೇತನ ತಾರತಮ್ಯ ಸರಿಪಡಿಸಲು ಸಮಿತಿ ರಚನೆ : ರಾಮಲಿಂಗಾರೆಡ್ಡಿ

ಬೆಂಗಳೂರು : ದೇವಾಲಯದ ಅರ್ಚಕರು/ನೌಕರರ ವೇತನ ತಾರತಮ್ಯವನ್ನು ಸರಿಪಡಿಸಲು ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡಂತೆ ಸಮಿತಿಯನ್ನು ರಚಿಸಿ, ಪರಿಶೀಲಿಸಿ ವರದಿ ಪಡೆಯಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಬುಧವಾರ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಕೆ. ಪ್ರತಾಪ್ ಸಿಂಹ ನಾಯಕ್ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ(ತಿದ್ದುಪಡಿ) ನಿಯಮಗಳು 2019ರ ನಿಯಮ 8ರ ಕೋಷ್ಠಕದಲ್ಲಿನ ವೇತನ ಶ್ರೇಣಿ ಮತ್ತು ಇತರೆ ಭತ್ಯೆಗಳನ್ನು ಪಡೆದು ಕರ್ತವ್ಯ ನಿರ್ವಹಿಸುತ್ತಿರುವ ದೇವಾಲಯದ ಅರ್ಚಕರು/ನೌಕರರು ಸರ್ಕಾರಿ ವೇತನ ಶ್ರೇಣಿ ನಿಗಧಿಪಡಿಸುವಂತೆ ಬೇಡಿಕೆ ಸಲ್ಲಿಸಿದ್ದಾರೆ, ಈ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂದರು.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳು ಅಧಿನಿಯಮ-1997 ಮತ್ತು ನಿಯಮಗಳು-2002ರಡಿಯಲ್ಲಿ ದೇವಾಲಯದ ಅರ್ಚಕರು, ಸಿಬ್ಬಂದಿ ಸರಕಾರದ ನೌಕರರಾಗಿರುವುದಿಲ್ಲ. ಹೀಗಾಗಿ ಅವರಿಗೆ ಸರಕಾರಿ ನೌಕರರಿಗೆ ಲಭ್ಯವಿರುವ ವೇತನ ಮತ್ತು ಭತ್ಯೆಗಳ ಸಂಪೂರ್ಣ ಸೌಲಭ್ಯಗಳನ್ನು ನೀಡಲು ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಆದರೂ, ದೇವಾಲಯದ ನೌಕರರಿಗೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಮತ್ತು ನಿಯಮಗಳು 2002ರ ನಿಯಮ 8(2) ರಡಿಯಲ್ಲಿ ವೇತನ ನಿಗಧಿಪಡಿಸಲು ಅವಕಾಶ ಕಲ್ಪಿಸಲಾಗಿದ್ದು ಅದರಂತೆ ವೇತನ ನಿಗಧಿಪಡಿಸಲಾಗುತ್ತಿದೆ. ಅಧಿನಿಯಮ 1997ರ ಸೆಕ್ಷನ್ 36(2)ರಂತೆ ದೇವಾಲಯದ ಸಿಬ್ಬಂದಿ ವೆಚ್ಚವು ಒಟ್ಟು ವಾರ್ಷಿಕ ಆದಾಯದ ಶೇ.35ಅನ್ನು ಮೀರಬಾರದು ಎಂದು ಇದೆ. ಹೀಗಾಗಿ ಈ ಮಿತಿಯೊಳಗೆ ದೇವಾಲಯದ ನೌಕರರ ವೇತನವನ್ನು ನಿಗಧಿಪಡಿಸಲಾಗುತ್ತಿದೆ ಎಂದು ಹೇಳಿದರು.