ಸಾಹಿತಿಗಳ ಟೀಕೆಯು ಅವಕಾಶವಾದದ ಪ್ರತೀಕ : ರಮೇಶ್ ಬಾಬು
ಅಕಾಡೆಮಿ-ಪ್ರಾಧಿಕಾರಗಳ ಅಧ್ಯಕ್ಷರ ಜೊತೆ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದ್ದ ಡಿಸಿಎಂ
ರಮೇಶ್ ಬಾಬು
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯದ ಅಕಾಡೆಮಿ ಮತ್ತು ಪ್ರಾಧಿಕಾರಿಗಳ ಅಧ್ಯಕ್ಷರ ಜೊತೆ ನಡೆಸಿದ ಸಭೆಯನ್ನು ಕೆಲವು ಸಾಹಿತಿಗಳು ಮತ್ತು ಚಿಂತಕರು ಟೀಕಿಸುತ್ತಿರುವುದು ಅವರ ಅವಕಾಶವಾದದ ಪ್ರತೀಕವಾಗಿದೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಟೀಕಿಸಿದ್ದಾರೆ.
ಗುರುವಾರ ಈ ಸಂಬಂಧ ಹೇಳಿಕೆ ನೀಡಿರುವ ಅವರು, ಇವರಲ್ಲಿ ಕೆಲ ಹಿರಿಯ ಸಾಹಿತಿಗಳು, ಸಿದ್ದಾಂತ ಮತ್ತು ಅಧಿಕಾರದೊಂದಿಗೆ ರಾಜಿಯಾಗದೆ ಅಧಿಕಾರವನ್ನು ಬಯಸದೆ ರಾಜಕಾರಣದೊಂದಿಗೆ ಅಂತರವನ್ನು ಕಾಯ್ದುಕೊಂಡು ಬಂದಿದ್ದಾರೆ. ಆದರೆ ಕೆಲವರು ಅವಕಾಶವಿರುವ ಎಲ್ಲ ಲಾಬಿಗಳನ್ನು ಮಾಡಿ ಅಧಿಕಾರ ಸಿಗದಿದ್ದಾಗ ರಾಜಕಾರಣವನ್ನು ಜರಿಯುವ ಕೆಲಸಕ್ಕೆ ಮುಂದಾಗಿದ್ದಾರೆ. ಇವರನ್ನು ನೋಡಿದರೆ ದ್ರಾಕ್ಷಿ ಸಿಗದ ನರಿಯು ದ್ರಾಕ್ಷಿಯನ್ನು ಹುಳಿ ಎಂದು ಜರಿಯುವ ಕಥೆ ನೆನಪಾಗುತ್ತದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಸಿದ್ದಾಂತ ಯಾವಾತ್ತೂ ಸಾಂಸ್ಕೃತಿಕ ಸ್ವಾಯತ್ತತೆಯನ್ನು ಸಮರ್ಥಿಸಿಕೊಂಡು ಬಂದಿದೆ. ಅದೇ ಕಾರಣಕ್ಕಾಗಿ ರಾಜ್ಯದಲ್ಲಿ ಮತ್ತು ದೇಶದಲ್ಲಿ ಸ್ವಾಯತ್ತ ಸಂಸ್ಥೆಗಳ ರಚನೆಗೆ ಒತ್ತು ನೀಡಿದೆ. ರಚನಾತ್ಮಕ ಭಿನ್ನಾಭಿಪ್ರಾಯಗಳ ನಡುವೆಯೂ ಹಸ್ತಕ್ಷೇಪವಿಲ್ಲದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೊದಲಿನಿಂದಲೂ ಆದ್ಯತೆಯನ್ನು ನೀಡಿದೆ ಎಂದು ರಮೇಶ್ ಬಾಬು ಹೇಳಿದ್ದಾರೆ.
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಸಾಹಿತಿಗಳು ಮತ್ತು ಚಿಂತಕರು ತಮ್ಮ ಸಿದ್ದಾಂತಗಳಿಗೆ ಅನುಗುಣವಾಗಿ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳುವ ಅನಿವಾರ್ಯತೆ ಉಂಟಾಗಿದೆ. ಸಾಹಿತಿಗಳು ಮತ್ತು ಚಿಂತಕರು ರಾಜಕೀಯ ಪಕ್ಷದ ಅಧ್ಯಕ್ಷರೊಂದಿಗೆ ಒಂದು ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದ ಕಾರಣಕ್ಕಾಗಿ ತಮ್ಮ ವ್ಯಕ್ತಿತ್ವವನ್ನಾಗಲಿ ಅಥವಾ ಸಿದ್ಧಾಂತವನ್ನಾಗಲಿ ಕಳೆದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆಸಿದ ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರ ಸಭೆಯನ್ನು ಖಂಡಿಸಿ ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಬಹುತೇಕ ಸಾಹಿತಿಗಳು ಮತ್ತು ಲೇಖಕರು ವಿವಿಧ ಹುದ್ದೆಗಳನ್ನು ಬಯಸಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯನ್ನು ಎಡತಾಕಿದ್ದರು. ಸಾಹಿತಿಗಳು ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ವ್ಯಕ್ತ ಪಡಿಸಲು ಸ್ವತಂತ್ರರಾಗಿದ್ದಾರೆ. ಆದರೆ ಅಂತಹ ಅನಿಸಿಕೆ ಅಥವಾ ಟೀಕೆಗಳು ಆರೋಗ್ಯಕರ ಚೌಕಟ್ಟಿನಲ್ಲಿ ಇರಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಧಿಕಾರದೊಂದಿಗೆ ಎಂದೂ ರಾಜಿಯಾಗದ ಸಾಹಿತಿ ಲೇಖಕ ದೇವನೂರು ಮಹದೇವರಂತಹ ಅಪರೂಪದ ವ್ಯಕ್ತಿಗಳು ಸರಕಾರಗಳನ್ನು ರಾಜಕಾರಣಿಗಳನ್ನು ಟೀಕಿಸುವ ನೈತಿಕತೆಯನ್ನು ಇಂದಿಗೂ ಉಳಿಸಿಕೊಂಡಿದ್ದಾರೆ. ಇವರ ಸಾಲಿನಲ್ಲಿ ಬರುವವರನ್ನು ಹೊರತುಪಡಿಸಿ ಉಳಿದವರಿಗೆ ಕಾಂಗ್ರೆಸ್ ಸರಕಾರವನ್ನಾಗಲಿ ಅಥವಾ ಕಾಂಗ್ರೆಸ್ ಪಕ್ಷವನ್ನಾಗಲಿ ಅಥವಾ ಡಿ.ಕೆ.ಶಿವಕುಮಾರ್ ರವರನ್ನಾಗಲಿ ಟೀಕಿಸುವ ಯಾವುದೇ ನೈತಿಕತೆ ಇಲ್ಲ ಎಂದು ಅವರು ರಮೇಶ್ ಬಾಬು ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ರವರು ಸಾಂಸ್ಕೃತಿಕ ಸ್ವಾಯತ್ತತೆಯನ್ನು ಸಂರಕ್ಷಣೆ ಮಾಡುವ ಜವಾಬ್ದಾರಿಯನ್ನು ಹೊಂದಿದ್ದು, ಅವರು ನಡೆಸಿದ ಸಭೆಯು ರಾಜ್ಯದ ಸಾಂಸ್ಕೃತಿಕ ವಲಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಕೂಡಿದ್ದು, ಲೇಖಕರು ಮತ್ತು ಸಾಹಿತಿಗಳು ಇದನ್ನು ಟೀಕಿಸುವುದರ ಮೂಲಕ ಅವರ ನೈತಿಕ ಮೌಲ್ಯಗಳನ್ನು ಗಾಳಿಗೆ ತೂರಿದ್ದಾರೆ. ಸಾಹಿತಿಗಳು ಹಿತ್ತಲ ಬಾಗಿಲಿನ ಸಂಸ್ಕೃತಿಯನ್ನು ಕೈಬಿಟ್ಟು ಮನೆಯ ಮುಂಬಾಗಿಲಿನ ಮುಖಾಂತರ ಪ್ರವೇಶ ಮಾಡುವ ಸಂಸ್ಕೃತಿಯನ್ನು ಪಾಲಿಸಲಿ ಎಂದು ರಮೇಶ್ ಬಾಬು ಹೇಳಿದ್ದಾರೆ.