ದೇವರಾಜ ಅರಸು ಟ್ರಕ್ ಟರ್ಮಿನಲ್ ಅಕ್ರಮ | ಬಿಜೆಪಿ ನಾಯಕರ ಪಾತ್ರವಿಲ್ಲವೇ? : ರಮೇಶ್ ಬಾಬು
ಬೆಂಗಳೂರು : ‘ಕಾಂಗ್ರೆಸ್ ವಿರುದ್ಧ ಟೀಕೆ, ಪ್ರತಿಭಟನೆ ನಡೆಸುವ ಮಾಜಿ ಸಚಿವ ಬಿ.ಶ್ರೀರಾಮುಲು ‘ಡಿ.ದೇವರಾಜ ಅರಸು ಟ್ರಕ್ ಅಂಡ್ ಟರ್ಮಿನಲ್’ ಹಗರಣದಲ್ಲಿ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಬೇಕು. ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರದಲ್ಲಿ ಆ ಪಕ್ಷದ ನಾಯಕರ ಪಾತ್ರವಿಲ್ಲವೇ?. ಈ ಹಗರಣದ ನೈತಿಕತೆಯನ್ನು ಹೊತ್ತು ಶ್ರೀರಾಮುಲು ರಾಜಕೀಯ ನಿವೃತ್ತಿಗೆ ಮುಂದಾಗುತ್ತಾರೆಯೇ?’ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಪ್ರಶ್ನಿಸಿದ್ದಾರೆ.
ಶನಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಮಾಡುವುದೆಲ್ಲ ಅನಾಚಾರ ಮನೆಯ ಮುಂದೆ ಬೃಂದಾವನ’ ಎನ್ನುವಂತೆ ಬಿಜೆಪಿ ನಾಯಕರು ತಾವು ಮಾಡಿರುವ ಭ್ರಷ್ಟಾಚಾರಗಳನ್ನು ಮುಚ್ಚಿಕೊಳ್ಳಲು ನಿರಂತರವಾಗಿ ಸುಳ್ಳು ಹೇಳುತ್ತಾರೆ. ಕಾಂಗ್ರೆಸ್ ಸರಕಾರ ಹಿಂದಿನ ಬಿಜೆಪಿ ಅವಧಿಯಲ್ಲಿ ನಡೆದಿರುವ ಹಗರಣಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಬಯಲು ಮಾಡುವುದು ಅನಿವಾರ್ಯ’ ಎಂದು ಹೇಳಿದ್ದಾರೆ.
ಅರಸು ಟರ್ಮಿನಲ್‍ನ ಮಾಜಿ ಅಧ್ಯಕ್ಷ, ಬಿಜೆಪಿಯ ಡಿ.ಎಸ್.ವೀರಯ್ಯ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಕದ ತಟ್ಟಿರುತ್ತಾರೆ. ನ್ಯಾಯಾಲಯವು ಜಾಮೀನು ಅರ್ಜಿ ತಿರಸ್ಕರಿಸಿದ್ದು, ಪೊಲೀಸರು ತನಿಖೆಗಾಗಿ ಇವರನ್ನು ಬಂಧಿಸಿರುತ್ತಾರೆ. ಈ ಪ್ರಕರಣದಲ್ಲಿ ತಲೆಮಾರೆಸಿಕೊಂಡಿದ್ದ ವೀರಯ್ಯನವರಿಗೆ ತಮಿಳುನಾಡಿನ ಬಿಜೆಪಿ ನಾಯಕರು ಆಶ್ರಯ ನೀಡಿದ್ದರು.
ಅಲ್ಲದೆ, ಈ ಪ್ರಕಾರಣವನ್ನು ಮುಚ್ಚಿ ಹಾಕಲು ತನಿಖಾ ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ವ್ಯವಸ್ಥಿತ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡಿರುತ್ತಾರೆ. ಅಂದಿನ ಬಿಜೆಪಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಸಾರಿಗೆ ಸಚಿವ ಶ್ರೀರಾಮುಲು ಮೂಗಿನ ಅಡಿಯಲ್ಲಿ ಈ ಹಗರಣ ನಡೆದಿದ್ದು, ಬಿಜೆಪಿ ನಾಯಕರು ಶಾಮೀಲಾಗಿರುವುದು ಸ್ಪಷ್ಟ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಟರ್ಮಿನಲ್‍ನಲ್ಲಿ ಮೇಲ್ನೋಟಕ್ಕೆ 47 ಕೋಟಿ ರೂ.ಗಳ ಅವ್ಯವಹಾರ ಮತ್ತು ದುರುಪಯೋಗ ಕಾಣುತ್ತಿದ್ದು, ಇಲ್ಲಿ ಸುಮಾರು 200ಕೋಟಿ ರೂ.ಗಳಿಗೂ ಹೆಚ್ಚು ಅವ್ಯವಹಾರ ನಡೆದಿರುವ ಸಾದ್ಯತೆಗಳಿರುತ್ತದೆ. ಟ್ರಕ್ ಟರ್ಮಿನಲ್ ಸಂಸ್ಥೆಯ 47ಕೋಟಿ ಹಗರಣದಲ್ಲಿ ಹಣವು ನೇರವಾಗಿ ಕೇವಲ 3 ಸಂಸ್ಥೆಗಳಿಗೆ ಪಾವತಿ ಆಗಿರುತ್ತದೆ. ಈಗ ನಡೆಯುತ್ತಿರುವ ಸಿಐಡಿ ತನಿಖೆ ಮತ್ತು ಲೋಕಾಯುಕ್ತ ವಿಚಾರಣೆಯಲ್ಲಿ ಈ ಅವ್ಯವಹಾರ ಬಹಿರಂಗವಾಗಬೇಕಾಗಿದೆ ಎಂದು ರಮೇಶ್‍ಬಾಬು ತಿಳಿಸಿದ್ದಾರೆ.