ವಿಜಯೇಂದ್ರ ಬಾಲಭವನದ ಪಟಾಲಂ ಪ್ರಾಯಶ್ಚಿತ ಮಾಡಿಕೊಳ್ಳಲಿ : ರಮೇಶ್ ಬಾಬು
ರಮೇಶ್ ಬಾಬು
ಬೆಂಗಳೂರು : ‘ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರಾಜೀನಾಮೆ ನಿರೀಕ್ಷೆಯಲ್ಲಿರುವ ಜಗನ್ನಾಥ ಭವನದ ನಾಯಕರು, ಇವರ ಹೋರಾಟಗಳು ನಕಲಿ ಎಂದು ಪದೇ ಪದೇ ಹೇಳುತ್ತಿದ್ದಾರೆ. ‘ಗಾಂಧಿ ಭಾರತ ಕಾರ್ಯಕ್ರಮ’ ವಿರುದ್ಧ ಹೋರಾಟ ಮಾಡುವ ಮೊದಲು ವಿಜಯೇಂದ್ರ ಮತ್ತವರ ಬಿಜೆಪಿ ಬಾಲಭವನದ ಪಟಾಲಂ ಪ್ರಾಯಶ್ಚಿತ ಮಾಡಿಕೊಳ್ಳಲಿ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ.
ಗುರುವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಬೆಳಗಾವಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಕ್ಷವು ಮಹಾತ್ಮ ಗಾಂಧೀಜಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿ ನೂರು ವರ್ಷ ಆದ ಹಿನ್ನೆಲೆಯಲ್ಲಿ ಗಾಂಧಿ ಭಾರತ ಕಾರ್ಯಕ್ರಮ ಆಯೋಜಿಸಲಾಗಿದೆ. ದೇಶದಲ್ಲಿ ಗಾಂಧಿ ತತ್ವ ಸಿದ್ದಾಂತಗಳಿಗೆ ಆದರ್ಶಗಳಿಗೆ ಎಳ್ಳು ನೀರು ಬಿಟ್ಟು ಕೋಮುವಾದ ದ್ವೇಷ ಬಿತ್ತುತ್ತಿರುವ ಮತೀಯ ಶಕ್ತಿಗಳ ವಿರುದ್ಧ ದೇಶದಲ್ಲಿ ಗಾಂಧೀವಾದ ತತ್ವಗಳ ಬಿತ್ತಲು ಗಾಂಧಿ ಭಾರತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.
‘ವಿಚಾರಧಾರೆ ಇಲ್ಲದ ಎಳಸು ಮನಸ್ಸಿನ ಕರ್ನಾಟಕದ ಬಾಲಭವನದ ಬಿಜೆಪಿ ನಾಯಕ ಕಂ ಬಿಜೆಪಿ ಅಧ್ಯಕ್ಷ ವಿಜಯೇಂದ್ರಣ್ಣ ಗಾಂಧಿ ಭಾರತ ಕಾರ್ಯಕ್ರಮ ವಿರುದ್ಧ ಬೆಂಗಳೂರು ಗಾಂಧಿ ಪ್ರತಿಮೆ ಬಳಿ ಧರಣಿ ಮಾಡುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ವಿರೋಧ ಮಾಡುವ ಕಾರಣಕ್ಕಾದರೂ ಗಾಂಧಿ ಹೋರಾಟ ಅನುಸರಿಸುವ ಬಿಜೆಪಿಗೆ ಅಭಿನಂದನೆಗಳು. ಈ ಧರಣಿ ಸತ್ಯಾಗ್ರಹದಲ್ಲಿ ಬಿಜೆಪಿ ನಾಯಕರು ನಾಥೂರಾಮ್ ಗೋಡ್ಸೆ ಫೋಟೋ ಕೊರಳಿಗೆ ನೇತು ಹಾಕಿಕೊಂಡರೆ ಕನಿಷ್ಠ ಗಾಂಧೀಜಿ ಆತ್ಮಕ್ಕೆ ಶಾಂತಿ ದೊರೆಯುತ್ತದೆ’ ಎಂದು ಅವರು ಲೇವಡಿ ಮಾಡಿದ್ದಾರೆ.
ತಮ್ಮ ಸುದ್ದಿ ಗೋಷ್ಟಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಎರಡು ವಿಚಾರ/ಹೆಸರು ಪ್ರಸ್ತಾಪ ಮಾಡಿದ್ದಾರೆ. ಒಂದು ಅಂಬೇಡ್ಕರ್, ಇನ್ನೊಂದು ಶಾಮ್ ಪ್ರಸಾದ್ ಮುಖರ್ಜಿ. ಪಕ್ಷ ರಾಜಕಾರಣ ಬದಿಗಿಟ್ಟು ಅಂಬೇಡ್ಕರ್ರನ್ನು ಕೇಂದ್ರ ಕಾನೂನು ಸಚಿವರು ಮತ್ತು ಸಂವಿಧಾನ ರಚನಾ ಸಮಿತಿ ಅಧ್ಯಕ್ಷರು ಮಾಡಿದ್ದು ಕಾಂಗ್ರೆಸ್. ಅಂಬೇಡ್ಕರ್ ಆಶಯಗಳ ಸಂವಿಧಾನ ಮೂಲಕ ಜಾರಿ ಮಾಡಿದ ಕೀರ್ತಿ ಕಾಂಗ್ರೆಸ್ಗೆ ಸಲ್ಲುತ್ತದೆ. ಆದರೆ ಹಿಂದೂಧರ್ಮದಲ್ಲಿ ಸಾಯಲು ಬಯಸದೆ ಅಂಬೇಡ್ಕರ್ ಬೇರೆ ಧರ್ಮ ಸೇರಲು ಮನುವಾದಿಗಳು ಅರ್ಥಾತ್ ಬಿಜೆಪಿಗರು ಕಾರಣ ಅಲ್ಲವೇ? ಈ ಕುರಿತು ವಿಜಯೇಂದ್ರ್ರ ಪೂರ್ವಿಕರು ಪ್ರಾಯಶ್ಚಿತ ಯಾವಾಗ ಮಾಡಿಕೊಂಡರು? ಎಂದು ರಮೇಶ್ಬಾಬು ವಾಗ್ದಾಳಿ ನಡೆಸಿದ್ದಾರೆ.
ಸಂವಿಧಾನದ ಕಲಂ 370ರ ಕುರಿತು ಜನಸಂಘದ ಸ್ಥಾಪಕ ಶಾಮ್ ಪ್ರಸಾದ್ ಮುಖರ್ಜಿ ಹೆಸರನ್ನು ಬಿಜೆಪಿ ಯತೇಚ್ಛವಾಗಿ ಬಳಸುತ್ತದೆ. ಜಮ್ಮು-ಕಾಶ್ಮೀರಗೆ ಕಲಂ-370 ವಿರೋಧ ಮಾಡಿದ್ದ ಅವರು, ನೆಹರು ಅಂದಿನ ತೀರ್ಮಾನ ಸರಿ ಮತ್ತು ಅನಿವಾರ್ಯ ಎಂದು ಲೋಕಸಭೆಯಲ್ಲಿ ಮಾತನಾಡಿರುವುದು ಸುಳ್ಳೇ? ಸತ್ಯವನ್ನು ತಿರುಚುವ ಬಿಜೆಪಿ ಲೋಕಸಭೆ ನಡವಳಿಕೆಯ ಅವರ ಭಾಷಣ ಓದಲಿ ಅಥವಾ ಬಹಿರಂಗ ಪಡಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.
‘ಬಿಜೆಪಿ ಗುಂಪುಗಾರಿಕೆಗೆ ಉತ್ತರ ನೀಡಲು ಸಾಧ್ಯವಾಗದೆ ತತ್ತರಿಸಿರುವ ವಿಜಯೇಂದ್ರ, ಗಾಂಧಿ ಭಾರತ ಐತಿಹಾಸಿಕ ಕಾರ್ಯಕ್ರಮ ವಿರೋಧಿಸುವ ಮೂಲಕ ತಮ್ಮ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ರಾಜಕಾರಣದಲ್ಲಿ ಗಟ್ಟಿ ನಿಲುವು ಮತ್ತು ಹೋರಾಟ ಗೊತ್ತಿಲ್ಲದೇ ಅಧಿಕಾರ ಪಡೆದಿರುವ ವಿಜಯೇಂದ್ರ, ತಮಗೆ ಶಕ್ತಿ ಇದ್ದರೆ ನಾಳಿನ ಹೋರಾಟಕ್ಕೆ ಅವರ ಪಕ್ಷದ ಎಲ್ಲ ಶಾಸಕರು ಒಟ್ಟಾಗಿ ಪಾಲ್ಗೊಳ್ಳವಂತೆ ಮಾಡಿದರೆ ಅದೇ ಅವರ ಅತಿದೊಡ್ಡ ಸಾಧನೆ ಆಗುತ್ತದೆ. ಬಾಲಭವನದ ಈ ಬಿಜೆಪಿ ಅಧ್ಯಕ್ಷರ ನೋಡಿ ಜಗನ್ನಾಥ ಭವನದ ಬಿಜೆಪಿ ನಾಯಕರು ಬೀದಿ ಬೀದಿಯಲ್ಲಿ ನಗುತ್ತಿದ್ದಾರೆ’
-ರಮೇಶ್ಬಾಬು, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ