ಬೆಂಗಳೂರು ವಕೀಲರ ಸಂಘದ ಚುನಾವಣೆ | ಅಧ್ಯಕ್ಷ ಸ್ಥಾನಕ್ಕೆ ಕೆಪಿಸಿಸಿಯಿಂದ ಯಾವುದೇ ಅಧಿಕೃತ ಅಭ್ಯರ್ಥಿಯನ್ನು ಘೋಷಿಸಿಲ್ಲ: ರಮೇಶ್ ಬಾಬು
ಜೆಡಿಎಸ್ ಪರ ಕೆಲಸ ಮಾಡುತ್ತಿರುವ ರಮೇಶ್ ಬಾಬು ಅವರನ್ನು ಅಮಾನತು ಮಾಡಿ ಎಂದ ಅಂಜನಮೂರ್ತಿ

ರಮೇಶ್ ಬಾಬು
ಬೆಂಗಳೂರು : ಬೆಂಗಳೂರು ವಕೀಲರ ಸಂಘದ ಆಡಳಿತ ಮಂಡಳಿಗೆ ಫೆ.2ರಂದು ಚುನಾವಣೆ ನಡೆಯಲಿದ್ದು, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಕೆಪಿಸಿಸಿಯಿಂದ ಯಾವುದೇ ಅಧಿಕೃತ ಅಭ್ಯರ್ಥಿಯನ್ನು ಘೋಷಿಸಿಲ್ಲ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಸ್ಪಷ್ಟನೆ ನೀಡಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.
ಈ ಸಂಬಂಧ ರಮೇಶ್ ಬಾಬು ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕೆಪಿಸಿಸಿ ಕಾನೂನು ವಿಭಾಗದ ರಾಜ್ಯ ಕಾರ್ಯದರ್ಶಿ ಅಂಜನಮೂರ್ತಿ ಬಿ ಅವರು, ಕಾಂಗ್ರೆಸ್ನಿಂದ ರಮೇಶ್ ಬಾಬು ಅಮಾನತಿಗೆ ಆಗ್ರಹಿಸಿದ್ದಾರೆ.
ʼಏಷ್ಯಾದಲ್ಲೇ ಅತಿ ದೊಡ್ಡದಾದ ಬೆಂಗಳೂರು ವಕೀಲರ ಸಂಘ ಚುನಾವಣೆಗಳು ನಡೆಯುತ್ತಿವೆ. ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಅವರ ಪಕ್ಷಗಳು ತಮ್ಮ ಅಭ್ಯರ್ಥಿಗಳಿಗೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡುತ್ತಿವೆ. ಆದರೆ ರಮೇಶ್ ಬಾಬು ಅಧ್ಯಕ್ಷ ಸ್ಥಾನಕ್ಕೆ ಕೆಪಿಸಿಸಿಯಿಂದ ಯಾವುದೇ ಅಧಿಕೃತ ಅಭ್ಯರ್ಥಿಯನ್ನು ಘೋಷಿಸಿಲ್ಲ ಎಂದು ಪ್ರಕಟನೆ ಹೊರಡಿಸಿದ್ದಾರೆ. ಈ ಪತ್ರ ಅನಗತ್ಯವಾಗಿತ್ತು. ರಮೇಶ್ ಬಾಬು ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ರಮೇಶ್ ಬಾಬು ಅವರ ಈ ಪತ್ರವು ಪಕ್ಷದ ಕಾರ್ಯಕರ್ತರನ್ನು ನಿರಾಶೆಗೊಳಿಸಿದೆ ಮತ್ತು ಗೊಂದಲಕ್ಕೆ ಕಾರಣವಾಗಿದೆʼ ಎಂದು ಅಂಜನಮೂರ್ತಿ ಹೇಳಿದ್ದಾರೆ.