ಚಿನ್ನ ಕಳ್ಳಸಾಗಣೆ ಆರೋಪ ಪ್ರಕರಣ | ನಟಿ ರನ್ಯಾ ರಾವ್ ನಿವಾಸದ ಮೇಲೆ ಕಂದಾಯ ಗುಪ್ತಚರ ಅಧಿಕಾರಿಗಳ ದಾಳಿ
17.29 ಕೋಟಿ ರೂ.ಮೌಲ್ಯದ ಆಸ್ತಿ ವಶಕ್ಕೆ

ರಾನ್ಯಾ ರಾವ್ x.com/htTweets
ಬೆಂಗಳೂರು: ಅರಬ್ ದೇಶಗಳಿಂದ ವಾಮಮಾರ್ಗದಲ್ಲಿ ಚಿನ್ನ ಸಾಗಾಣೆ ಮಾಡಿ ಸಿಕ್ಕಿಬಿದ್ದಿರುವ ಆರೋಪದಡಿ ನಟಿ, ರನ್ಯಾ ರಾವ್ ನಿವಾಸದ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಚಿನ್ನ ಸೇರಿ ಒಟ್ಟು 17.29 ಕೋಟಿ ರೂ.ಮೌಲ್ಯದ ಆಸ್ತಿ ವಶಕ್ಕೆ ಪಡೆದಿದ್ದಾರೆ.
ನಟಿ ರನ್ಯಾರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಸೋಮವಾರ ತಡರಾತ್ರಿ ವಶಕ್ಕೆ ಪಡೆದಿದ್ದರು. ಬಳಿಕ ಅವರು ವಾಸವಿದ್ದ ನಗರದ ಲ್ಯಾವೆಲ್ಲೆ ರಸ್ತೆಯಲ್ಲಿರುವ ಫ್ಲ್ಯಾಟ್ನಲ್ಲಿ ಶೋಧ ನಡೆಸಿದ್ದು, ಈ ವೇಳೆ 2.06ಕೋಟಿ ರೂ.ಮೌಲ್ಯದ ಚಿನ್ನ ಹಾಗೂ ನಗದು ಸೇರಿ 4.73 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ.
ಈ ಮೂಲಕ 1962ರ ಕಸ್ಟಮ್ಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ರನ್ಯಾ ಅವರಿಂದ ಒಟ್ಟು 12.56 ಕೋಟಿ ಮೌಲ್ಯದ 14.2 ಕೆ.ಜಿ ವಿದೇಶಿ ಮೂಲದ ಚಿನ್ನ ಮತ್ತು 4.73 ಕೋಟಿ ಮೌಲ್ಯದ ಇತರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ ತಿಳಿಸಿದೆ.
ಪ್ರಕರಣದಲ್ಲಿ ಚಿನ್ನ, ನಗದು ಸೇರಿದಂತೆ ಒಟ್ಟು 17.29 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡ ಅತಿದೊಡ್ಡ ಪ್ರಮಾಣದ ಚಿನ್ನದಲ್ಲಿ ಇದೂ ಒಂದಾಗಿದೆ ಎಂದು ಡಿಆರ್ಐ ಮಾಹಿತಿ ನೀಡಲಾಗಿದೆ.
ಪದೇ ಪದೇ ಡಿಜಿಪಿ ಪುತ್ರಿ ಎಂದಿದ್ದ ರನ್ಯಾ ರಾವ್ :
ಇತ್ತೀಚಿನ ದಿನಗಳಲ್ಲಿ ಭಾರತ ಹಾಗೂ ದುಬೈ ನಡುವೆ ನಿರಂತರವಾಗಿ ಪ್ರಯಾಣಿಸುತ್ತಿದ್ದ ರನ್ಯಾ ರಾವ್ ಕುರಿತು ಕಂದಾಯ ಗುಪ್ತಚರ ಇಲಾಖೆಯ ಅಧಿಕಾರಿಗಳು ನಿಗಾ ವಹಿಸಿದ್ದರು. ಕಳೆದ 15 ದಿನಗಳ ಅವಧಿಯಲ್ಲಿ 4 ಬಾರಿ ರನ್ಯಾ ರಾವ್ ದುಬೈಗೆ ತೆರಳಿ ವಾಪಸ್ ಮರಳಿದ್ದರು. ಸೋಮವಾರ ರಾತ್ರಿ ಹೆಚ್ಚಿನ ಚಿನ್ನಾಭರಣಗಳನ್ನು ಧರಿಸಿದ್ದ ರನ್ಯಾ ರಾವ್, ಉಳಿದ ಚಿನ್ನವನ್ನು ಬಟ್ಟೆಯಲ್ಲಿ ಬಚ್ಚಿಟ್ಟಿದ್ದರು. ಏರ್ಪೋರ್ಟ್ನಲ್ಲಿ ತಾನು ಡಿಜಿಪಿಯವರ ಪುತ್ರಿ ಎಂದು ಹೇಳಿಕೊಂಡು ಪದೇ ಪದೇ ಬಚಾವ್ ಆಗಿ ತೆರಳುತ್ತಿದ್ದರು ಎನ್ನುವ ಮಾಹಿತಿ ಗೊತ್ತಾಗಿದೆ