ಅತ್ಯಾಚಾರ ಪ್ರಕರಣ | ಜಾಮೀನು ಕೋರಿ ಪ್ರಜ್ವಲ್ ರೇವಣ್ಣ 2ನೇ ಬಾರಿ ಹೈಕೋರ್ಟ್ ಮೊರೆ
ಬೆಂಗಳೂರು: ಹೊಳೆನರಸೀಪುರದ ತಮ್ಮ ನಿವಾಸದಲ್ಲಿ ಮನೆಗೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಅವರು ಇತರೆ ಆರೋಪಿಗಳ ಮೇಲಿನ ವಿಚಾರಣೆಗೆ ತಡೆ ನೀಡಲಾಗಿದೆ ಎನ್ನುವ ಆಧಾರದಲ್ಲಿ ತಮಗೆ ಜಾಮೀನು ನೀಡಲು ಮನವಿ ಮಾಡಲಾಗದು ಎಂದು ಹೈಕೋರ್ಟ್ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.
ತಮ್ಮ ವಿರುದ್ಧ ದಾಖಲಾಗಿರುವ ಮೊದಲನೇ ಅತ್ಯಾಚಾರ ಪ್ರಕರಣದಲ್ಲಿ 2ನೇ ಬಾರಿ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ.
ವಿಚಾರಣೆ ವೇಳೆ ಪ್ರಜ್ವಲ್ ರೇವಣ್ಣ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿ, ಆರೋಪಿಸಲಾಗಿರುವ ಅತ್ಯಾಚಾರ ಘಟನೆ 2021ರಲ್ಲಿ ನಡೆದಿದ್ದು, ನಾಲ್ಕೂವರೆ ವರ್ಷಗಳ ಬಳಿಕ ದೂರು ದಾಖಲಿಸಲಾಗಿದೆ ಎಂದು ವಾದ ಮಂಡಿಸಿದರು. ವಿಶೇಷ ಸರಕಾರಿ ಅಭಿಯೋಜಕ ಬಿ.ಎನ್.ಜಗದೀಶ್ ಅವರು ಪ್ರತಿವಾದ ಮಂಡಿಸಿದರು. ವಾದ ಆಲಿಸಿದ ಪೀಠ, ಇತರೆ ಆರೋಪಿಗಳ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ಇದ್ದರೂ ನಿಮ್ಮ ವಿರುದ್ಧ ಸಾಕ್ಷಿಗಳಿವೆ. ವಿಶೇಷವಾದ ಕಾರಣ ತೋರದ ಹೊರತು ಜಾಮೀನು ಹೇಗೆ ನೀಡಲು ಸಾಧ್ಯ? ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆಯನ್ನು ಎ.15ಕ್ಕೆ ಮುಂದೂಡಿದರು.