ಪುಸ್ತಕ ಖರೀದಿ | ಸರಕಾರ ಜಿಪುಣತನ ನಿಟ್ಟು ಹೆಚ್ಚುವರಿ ಅನುದಾನ ನೀಡಬೇಕು : ಆರ್.ಅಶೋಕ್

ಆರ್.ಅಶೋಕ್
ಬೆಂಗಳೂರು : ‘ಸರಕಾರಿ ಶಾಲಾ-ಕಾಲೇಜುಗಳ ಗ್ರಂಥಾಲಯಗಳಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 2 ಲಕ್ಷ ರೂ.ಗಳ ಮೊತ್ತದ ಪುಸ್ತಕಗಳನ್ನು ಖರೀದಿಸಿ ನೀಡುವುದು ಒಳ್ಳೆಯ ಯೋಜನೆ. ಈ ವಿಚಾರದಲ್ಲಿ ಸರಕಾರ ಜಿಪುಣತನ ಬಿಟ್ಟು ಹೆಚ್ಚುವರಿ ಅನುದಾನ ನೀಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅವರು, ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳ ಆಯೋಜನೆ ಒಳ್ಳೆಯದು. ಅದೇ ರೀತಿಯಲ್ಲಿ ಶಾಸಕರ ಅನುದಾನದಲ್ಲಿ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಗೆ ಸೂಚನೆ ನೀಡಿರುವುದು ಸ್ವಾಗತಾರ್ಹ. ಆದರೆ, ಸರಕಾರ ಹೆಚ್ಚುವರಿ ಅನುದಾನವನ್ನು ನೀಡಲಿ ಎಂದು ಕೋರಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸ್ಪೀಕರ್ ಖಾದರ್, ‘ಶಾಸಕರು ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 2ಲಕ್ಷ ರೂ. ಮೊತ್ತದ ವರೆಗೆ ಪುಸ್ತಕಗಳನ್ನು ಖರೀದಿಸಿ ಸರಕಾರಿ ಶಾಲಾ-ಕಾಲೇಜುಗಳಿಗೆ ನೀಡಲು ಆದೇಶ ಹೊರಡಿಸಲಾಗಿದೆ. ಖುದ್ದು ಶಾಸಕರೇ ಪುಸ್ತಕ ಮಳಿಗೆಗಳಿಗೆ ತೆರಳಿ ಕೃತಿಗಳನ್ನು ಆಯ್ಕೆ ಮಾಡಿ ಪ್ರಕಾಶಕರಿಗೆ ತಿಳಿಸಿ, ಜಿಲ್ಲಾಧಿಕಾರಿಗೆ ಪಟ್ಟಿ ಕೊಟ್ಟರೇ ಸಾಕು ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಸಿ.ಸಿ.ಪಾಟೀಲ್, ಜಿಲ್ಲಾಧಿಕಾರಿಗಳೇಕೇ? ನಾವೇ ನೇರವಾಗಿ ನೀಡಬಹುದಲ್ಲ ಎಂದರು. ಬಳಿಕ ಪ್ರತಿಕ್ರಿಯಿಸಿದ ಸ್ಪೀಕರ್ ಖಾದರ್, ಶಾಸಕರು ತಮಗೆ ಇಷ್ಟ ಬಂದ ಉತ್ತಮ ಕೃತಿಗಳನ್ನು ಆಯ್ಕೆ ಮಾಡಿ ಗ್ರಂಥಾಲಯಗಳಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಸ್ಪಷ್ಟಣೆ ನೀಡಿದರು.