ನಟ ದರ್ಶನ್ ಬಂಧನ | ಪೊಲೀಸ್ ಠಾಣೆ ಸುತ್ತ ಶಾಮಿಯಾನದ ಪರದೆ, ನಿಷೇಧಾಜ್ಞೆಗೆ ಬಿಜೆಪಿ ಆಕ್ಷೇಪ
ಬೆಂಗಳೂರು : ನಟ ದರ್ಶನ್ ಸೇರಿದಂತೆ 13 ಆರೋಪಿಗಳ ತನಿಖೆ ನಡೆಸುತ್ತಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ನಟ ಕಾಣದಂತೆ ಶಾಮಿಯಾನದ ಪರದೆ ಹಾಕಲಾಗಿದೆ. ಠಾಣೆಯ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿರುವುದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಗುರುವಾರ ಈ ಸಂಬಂಧ ನಗರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಪೊಲೀಸ್ ಠಾಣೆಗೆ 144 ಸೆಕ್ಷನ್ ಹಾಕುವುದು ಎಂದರೆಪೊಲೀಸ್ ಠಾಣೆ ರಕ್ಷಿಸಲು ಇನ್ನೊಬ್ಬ ಖಾಸಗಿಯವರಿಗೆ ಕೊಟ್ಟಂತೆ. ಅಂದರೆ, ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಹೋಗಿದೆ ಎಂಬುದಕ್ಕೆ ನಿದರ್ಶನ ಎಂದು ಆಕ್ಷೇಪಿಸಿದರು.
ಮಾಧ್ಯಮದವರನ್ನು ದೂರ ಇಡುವ ಉದ್ದೇಶ, ಇನ್ನೊಬ್ಬರನ್ನು ದೂರವಿಡಲು ಮತ್ತು ಠಾಣೆಯಲ್ಲಿ ತಮ್ಮ ವೈಯಕ್ತಿಕ ಹಿತಾಸಕ್ತಿಯ ಚಟುವಟಿಕೆ ಮಾಡುವುದಕ್ಕಾಗಿ ಅಥವಾ ಯಾರನ್ನೋ ಓಲೈಕೆಗೆ 144ನೇ ಸೆಕ್ಷನ್ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಟೀಕಿಸಿದರು.
ಕಾನೂನು ಎಲ್ಲರಿಗೂ ಸಮಾನ. ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡುವುದೇ ಕಾನೂನು. ನಮ್ಮ ಸಂವಿಧಾನದಂತೆ ಕಾನೂನಿನಡಿ ಎಲ್ಲರೂ ಸಮಾನರು. ಆದರೆ, ವಿಐಪಿಯನ್ನು ಕರೆದುಕೊಂಡು ಬಂದ ತಕ್ಷಣ ಶಾಮಿಯಾನ ಹಾಕಿ, ಮಾಧ್ಯಮದವರ ಮೇಲೆ ಹಲ್ಲೆ ಮಾಡಿ, ಮಾಧ್ಯಮದವರನ್ನು ಪೊಲೀಸ್ ಠಾಣೆ ಆವರಣಕ್ಕೆ ಬಿಡಲಾರದಂತೆ ವರ್ತಿಸುತ್ತಿದ್ದು, ಇದು ಸರಕಾರ ಯಾವ ರೀತಿ ಆಡಳಿತ ನಡೆಸುತ್ತಿದೆ ಎಂಬುದಕ್ಕೆ ಸಾಕ್ಷಿ ಎಂದು ಪಿ.ರಾಜೀವ್ ವಿವರಿಸಿದರು.
ಕೊಲೆ ಮಾಡಿದವನು, ಕೊಲೆಗೆ ಸಂಚು ಮಾಡಿದವನು, ಕೊಲೆಗೆ ದುಷ್ಪ್ರೇರಣೆ ನೀಡಿದವನು, ಕೊಲೆ ಪ್ರಕರಣದ ಸಾಕ್ಷಿ ನಾಶ ಮಾಡುವವನು, ಕೊಲೆಯ ಸಾಕ್ಷ್ಯಾದ ದಿಕ್ಕು ತಪ್ಪಿಸುವವನು ಈ ಎಲ್ಲ ಚಟುವಟಿಕೆಗಳು ಕೊಲೆಯ ಒಳಸಂಚಿನ ಭಾಗವೇ ಆಗುತ್ತದೆ. ಜನರಿಗೆ ತನಿಖಾ ಸಂಸ್ಥೆ, ಪೊಲೀಸ್ ಇಲಾಖೆ ಬಗ್ಗೆ ವಿಶ್ವಾಸ ಕಡಿಮೆ ಆಗಬಾರದು. ಇದು ಪೊಲೀಸ್ ಇಲಾಖೆಯ ಗುರುತರವಾದ ಜವಾಬ್ದಾರಿ ಎಂದು ಪಿ.ರಾಜೀವ್ ಹೇಳಿದರು.