ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಿಬಿಐಗೆ ವಹಿಸಲು ಕುಟುಂಬಸ್ಥರ ಒತ್ತಾಯ
ರೇಣುಕಾಸ್ವಾಮಿ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಉನ್ನತ ಮಟ್ಟದ ತನಿಖೆ ನಡೆಸುವುದರಿಂದ ನ್ಯಾಯ ಸಿಗುವ ಭರವಸೆಯಿದೆ ಎಂದು ಕೊಲೆಯಾದ ರೇಣುಕಾಸ್ವಾಮಿ ಕುಟುಂಬ ಒತ್ತಾಯಿಸಿದೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ರೇಣುಕಾಸ್ವಾಮಿ ಅವರ ಚಿಕ್ಕಪ್ಪ ಷಡಕ್ಷರಯ್ಯ, ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಠಾಣೆಯ ಸುತ್ತ ಶಾಮಿಯಾನ ಹಾಕಿಕೊಂಡು ದರ್ಶನ್ ಅವರನ್ನು ಮರೆಮಾಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವಿಚಾರಣಾಧೀನ ಆರೋಪಿಗಳಿಗೆ ಸಿಗರೇಟ್, ಮೊಬೈಲ್ ಪೋನ್ ಸೇರಿದಂತೆ ಭಕ್ಷ್ಯ ಭೋಜನದ ಆತಿಥ್ಯ ನೀಡುತ್ತಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗಿರುವಾಗ ತನಿಖೆಯಲ್ಲಿ ನ್ಯಾಯ ಸಿಗುವ ಅನುಮಾನಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ಯಾವುದೇ ಕುಟುಂಬಕ್ಕೂ ಈ ರೀತಿ ಅನ್ಯಾಯ ಆಗಬಾರದು. ಎಷ್ಟೇ ಪ್ರಭಾವಿ ಇದ್ದರೂ ತಕ್ಕ ಶಿಕ್ಷೆಯಾಗಲಿ. ಪೊಲೀಸರು ಪಾರದರ್ಶಕವಾಗಿ ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಎಂದು ಷಡಕ್ಷರಯ್ಯ ಒತ್ತಾಯಿಸಿದರು.